ಮೈಸೂರು: ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ, ಬಿಜೆಪಿ ಕಚೇರಿಗೆ ನುಗ್ಗಲು ಯತ್ನ
ಮೈಸೂರು: ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿದನ್ನು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಶಿವರಾಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಗೋಡ್ಸೆ ಭಾವಚಿತ್ರವನ್ನು ಸುಟ್ಟುಹಾಕಲಾಯಿತು. ಬಳಿಕ ಬಿಜೆಪಿ ಕಚೇರಿಗೆ ನುಗ್ಗಲು ಪ್ರಯತ್ನ ನಡೆಯಿತಾದರೂ ಪೊಲೀಸರು ತಡೆದರು.
ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಬಿಜೆಪಿ ಮತ್ತು ಆರ್.ಎಸ್.ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಇದೇ ವೇಳೆ ಮಾತನಾಡಿದ ಕೆ.ಶಿವರಾಮ್ ಬಿಜೆಪಿ ಆರ್.ಎಸ್.ಎಸ್. ಗೂಂಡಾಗಳು ಸಿದ್ದರಾಮಯ್ಯ ಅವರ ಮೇಲೆ ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾರೆ. ಇದಕ್ಕೆ ಸರ್ಕಾರದ ಬೆಂಬಲವಿರುವುದು ಎದ್ದುಕಾಣುತ್ತಿದೆ. ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ನಂತರ ಗೋಡ್ಸೆ ಭಾವಚಿತ್ರ ವಿರುವ ಫೋಟೋವನ್ನು ಸುಟ್ಟು ತಮ್ಮ ಆಕ್ರೋಶ ಹೊರಹಾಕಲಾಯಿತು.
ಬಳಿಕ ಗಾಂಧಿ ವೃತ್ತದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆಯತ್ತ ಪಾದಯಾತ್ರೆ ಮೂಲಕ ತೆರಳಿದ ಪ್ರತಿಭಟನಾಕಾರರು, ಆರ್.ಟಿ.ಓ ಕಚೇರಿ ಬಳಿ ಇರುವ ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದ್ದು, ಇದನ್ನು ಪೊಲೀಸರು ತಡೆದರು.
ಇದರಿಂದ ಕೆಲ ಕಾಲ ತಳ್ಳಾಟ, ನೂಕಾಟ ಉಂಟಾಯಿತು. ಜೊತೆಗೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತನ ಚಕಮಕಿಯೂ ನಡೆಯಿತು.
ಪ್ರತಿಭಟನೆಯಲ್ಲಿ ಕೆ.ಶಿವರಾಮ್, ಮಾದೇಶ್, ಪ್ರಕಾಶ್, ನಾಗೇಶ್ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.