×
Ad

ಕೊಡಗಿನ ಗೌರವಕ್ಕೆ ಧಕ್ಕೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

Update: 2022-08-19 18:02 IST

ಮಡಿಕೇರಿ ಆ.19 : ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆಯುವ ಮೂಲಕ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವೀರಸೇನಾನಿಗಳ ಶಿಸ್ತಿನ ನಾಡು ಕೊಡಗಿನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್.ಜನಾರ್ಧನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟನೆ ನೀಡಿರುವ ಅವರು ಹೆಮ್ಮೆಯ ಸೇನಾಧಿಕಾರಿಗಳು ಜನಿಸಿದ ಈ ಭೂಮಿಯಲ್ಲಿ ಎದೆಯುಬ್ಬಿಸಿ ಧೈರ್ಯದಿಂದ ನಡೆದುಕೊಳ್ಳದೆ ಕಾನೂನು ಉಲ್ಲಂಘಿಸಿ ಹೇಡಿತನ ಪ್ರದರ್ಶಿಸಿರುವುದು ಖಂಡನೀಯ. ಈ ಕೀಳು ಮಟ್ಟದ ವರ್ತನೆಯಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತ್ತಾಗಿದೆ  ಎಂದು ತಿಳಿಸಿದ್ದಾರೆ.

ಮಳೆಹಾನಿ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುವುದಕ್ಕಾಗಿ ಬಂದ ವಿರೋಧ ಪಕ್ಷದ ನಾಯಕನನ್ನು ಅವಮಾನಿಸಿದ್ದು ಸರಿಯಲ್ಲ. ಅನ್ನಭಾಗ್ಯದ ಮೂಲಕ ಬಡವರ ಹಸಿವು ನೀಗಿಸಿದ ಸಿದ್ದರಾಮಯ್ಯರ ಬಗ್ಗೆ ಇಡೀ ರಾಜ್ಯದ ಜನತೆಗೆ ಅಭಿಮಾನವಿದೆ. ಆದರೆ ಸ್ವಾಭಿಮಾನಿಗಳ ಜಿಲ್ಲೆ ಕೊಡಗಿನಲ್ಲಿ ಬಿಜೆಪಿ ಮಂದಿ ನಡೆಸಿಕೊಂಡ ರೀತಿ ಆ ಪಕ್ಷದ ಸಂಸ್ಕೃತಿಯನ್ನು ಬಿಂಬಿಸಿದೆ. ಕೊಡಗು ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಯಾವುದೇ ಪರಿಹಾರವನ್ನು ತರಲು ಸಾಧ್ಯವಾಗದ ಅಸಮರ್ಥ ಶಾಸಕರನ್ನು ಪ್ರಶ್ನೆ ಮಾಡದ ಬಿಜೆಪಿ ಕಾರ್ಯಕರ್ತರು ಅವಿವೇಕವನ್ನು ಮೆರೆದಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗಾಗಿ ಹೋರಾಟ ನಡೆಸದೆ ಕ್ಷುಲ್ಲಕ ರಾಜಕಾರಣಕ್ಕಾಗಿ ಕೊಡಗಿನ ಗೌರವವನ್ನು ಹರಾಜು ಹಾಕಿದ್ದಾರೆ ಎಂದು ಜನಾರ್ಧನ ಟೀಕಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News