×
Ad

ಮಂಡ್ಯ: ಮೊಟ್ಟೆ ತಿಂದು ಕಾಂಗ್ರೆಸ್, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Update: 2022-08-19 20:09 IST

ಮಂಡ್ಯ, ಆ.19: ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಬಿಜೆಪಿ (BJP) ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನವನದ ವಿಶ್ವೇಶ್ವರಯ್ಯ ಪ್ರತಿಮೆ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಭಾವಚಿತ್ರಗಳಿಗೆ ಮೊಟ್ಟೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:  ಸಾವರ್ಕರ್ ಭಾವಚಿತ್ರ ಅಳವಡಿಕೆ ಇನ್ನಷ್ಟು ಜಾಸ್ತಿಯಾಗಲಿದೆ: ಸಚಿವ ಸುನೀಲ್ ಕುಮಾರ್‌ 

ಬಿಜೆಪಿ ಮುಖಂಡರು, ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಪ್ರತಿಭಟನಾಕಾರರು ಸಾಮೂಹಿಕವಾಗಿ ಬೇಯಿಸಿದ ಮೊಟ್ಟೆಗಳನ್ನು ತಿಂದು, ಬಹುಜನರ ಆಹಾರ ಸಂಸ್ಕೃತಿ ಮೇಲೆ ನಡೆಸುತ್ತಿರುವ ದಾಳಿಯನ್ನು ವ್ಯಂಗ್ಯ ಮಾಡಿದರು.

ಬಿಜೆಪಿ ಸರಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಸಿದ್ದರಾಮೋತ್ಸವದ ಐತಿಹಾಸಿಕ ಯಶಸ್ಸು ಬಿಜೆಪಿಗರಿಗೆ ನಡುಕ ಹುಟ್ಟಿಸಿದೆ. ಹಾಗಾಗಿ ಜನರ ದಿಕ್ಕನ್ನು ಬೇರೆಡೆ ಸೆಳೆದು ತನ್ನ ವೈಫಲ್ಯ ಮರೆಮಾಚಲು ಇಂತಹ ಕಾನೂನುಬಾಹಿರ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಮುಖಂಡ ಗಣಿಗ ರವಿಕುಮಾರ್ ಮಾತನಾಡಿ, ಗಾಂಧಿಯನ್ನು ಕೊಂದ ಮನಸ್ಥಿತಿವರು ಸಿದ್ದರಾಮಯ್ಯ ಅವರ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಬಿಜೆಪಿ ಮುಖಂಡರ ಪ್ರಚೋಚನೆ ಕಾರಣವಾಗಿದೆ. ಇಂತಹ ಕೃತ್ಯದಿಂದ ಸಿದ್ದರಾಮಯ್ಯ ಅವರ ಬಲವನ್ನು ಕುಗ್ಗಿಸಲು ಸಾಧ್ಯವಿಲ್ಲ. ಆ.26ರಂದು ಕೊಡಗಿನಲ್ಲಿ ನಡೆಯುವ ಪ್ರತಿಭಟನೆಗೆ ಸಿದ್ದರಾಮಯ್ಯ ಅವರ ಜತೆ ಲಕ್ಷಾಂತರ ಜನ ಬರುತ್ತೇವೆ. ಸರಿಯಾದ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಮುಖ್ಯಮಂತ್ರಿ, ಗೃಹ ಸಚಿವರು ಕ್ಷಮೆ ಕೇಳಬೇಕು. ಕಾಂಗ್ರೆಸ್ ಕಾರ್ಯಕರ್ತರಿಗೂ ಮೊಟ್ಟೆ ಹೊಡೆಯುವುದೇ ಗೊತ್ತಿದೆ. ನೀವು ಮನೆಯಿಂದ ಹೊರಗೆ ಬರಲೇ ಸಾಧ್ಯವೇ ಇಲ್ಲದಂತಹ ಉಗ್ರ ಪ್ರತಿಭಟನೆ ಮಾಡುವ ಸಾಮರ್ಥ್ಯ ಇದೆ. ನಿಮ್ಮ ಗೂಂಡಾ ವರ್ತನೆಯನ್ನು ಸಹಿಸುವುದಿಲ್ಲ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ ಎಚ್ಚರಿಸಿದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್‍ಕುಮಾರ್, ಡಾ.ಎಚ್.ಎನ್.ರವೀಂದ್ರ, ಮುಡಾ ಮಾಜಿ ಅಧ್ಯಕ್ಷ ಜಬೀವುಲ್ಲಾ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ,  ನಯೀಂ, ಅಮರಾವತಿ ಚಂದ್ರಶೇಖರ್, ಅಕ್ರಂ ಪಾಷ, ಕುರುಬರ ಸಂಘದ ಮಾಜಿ ಅಧ್ಯಕ್ಷ ನಾಗರಾಜು, ಹಿಂದುಳಿದ ವರ್ಗದ ಮುಖಂಡರಾದ ಸಾತನೂರು ರಾಜು, ಕೃಷ್ಣ, ಶ್ರೀನಿವಾಸ್, ಸೋಮಶೇಖರ್, ಪ್ರಗತಿಪರ ಸಂಘಟನೆಯ ಎನ್.ನಾಗೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News