ದಾವಣಗೆರೆ | ಬಾಲಕಿಗೆ ಲೈಂಗಿಕ ದೌರ್ಜನ್ಯ ಯತ್ನ ಪ್ರಕರಣ: ಆರೋಪಿಗೆ 20 ವರ್ಷ ಜೈಲು
Update: 2022-08-19 21:03 IST
ದಾವಣಗೆರೆ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಅರೋಪ ಸಾಬೀತಾಗಿದ್ದು ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಮಕ್ಕಳ ಸ್ನೇಹಿ ನ್ಯಾಯಾಲಯ) ಆರೋಪಿಗೆ 20 ವರ್ಷ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಆರೋಪಿ 3 ವರ್ಷದ ಬಾಲಕಿಯನ್ನು ತಿಂಡಿ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಮೊದಲು ತಿಂಡಿ ಕೊಡಿಸಿದ್ದಾನೆ, ಬಳಿಕ ದನದ ಕೊಟ್ಟಿಗೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನ ಮಾಡಿದ್ದಾನೆ ಎಂದು ದೂರು ಸಲ್ಲಿಕೆಯಾಗಿತ್ತು. ತನಿಖೆ ನಡೆಸಿದ ಗ್ರಾಮಾಂತರ ಡಿವೈಎಸ್ಪಿ ಮಂಜುನಾಥ ಗಂಗಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎನ್. ಶ್ರೀಪಾದ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಕೆ.ಜಿ. ಜಯಪ್ಪ ಸರಕಾರದ ಪರವಾಗಿ ವಾದ ಮಂಡಿಸಿದ್ದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.