ರಾಜ್ಯದ ಸರ್ಕಾರಿ ಶಾಲೆಗಳ ಆಸ್ತಿ ವಿವರಗಳ ಕುರಿತಂತೆ ಶ್ವೇತಪತ್ರ ಹೊರಡಿಸಲು ನಿರಂಜನಾರಾಧ್ಯ ವಿ.ಪಿ. ಒತ್ತಾಯ
ಬೆಂಗಳೂರು : ಸರಕಾರ ಮತ್ತು ಸಾರ್ವಜನಿಕರ ಪರಿಶ್ರಮ ಹಾಗು ನೈಜ ದಾನಿಗಳು – ಪರೋಪಕಾರಿಗಳ ಉದಾರತೆಯಿಂದ ಕಟ್ಟಿಕೊಂಡ ಶಾಲೆಗಳ ಆಸ್ತಿ-ಪಾಸ್ತಿಗಳನ್ನು ಇಂದಿನ ಸರ್ಕಾರ ಮಾರಲು ಮುಂದಾಗಿರುವುದು ಅತ್ಯಂತ ಖಂಡನೀಯ. ರಾಜ್ಯದ ಸರ್ಕಾರಿ ಶಾಲೆಗಳ ಆಸ್ತಿ ವಿವರಗಳ ಕುರಿತಂತೆ ಶ್ವೇತಪತ್ರ ಹೊರಡಿಸಲು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.
ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕೆಂಬ ಬೇಡಿಕೆ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿತ್ತು. ಜ್ಯೋತಿ ಬಾಫುಲೆ, ಸಾವಿತ್ರೀ ಬಾಯಿ ಫುಲೆ, ದಾದಾಬಾಯಿ ನವರೋಜಿ, ಸಯ್ಯಾಜಿ ರಾವ್ ಗಾಯಕವಾಡ್, ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧಿ ಮುಂತಾದ ನಾಯಕರು ಸ್ವಾತಂತ್ರ್ಯ ಚಳುವಳಿಯ ಉದ್ದಕ್ಕೂ ಶಿಕ್ಷಣದ ಸಾರ್ವತ್ರೀಕರಣವನ್ನು ಪ್ರತಿಪಾದಿಸುತ್ತಲೇ ಬಂದವರು. ಈ ಎಲ್ಲಾ ಪ್ರಯತ್ನಗಳ ಭಾಗವಾಗಿ, ಸಂವಿಧಾನ ರಚನೆಯ ಸಂದರ್ಭದಲ್ಲಿ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸಂವಿಧಾನದಲ್ಲಿ ಒಂದು ಕಾಲಮಿತಿ ಕಾರ್ಯ ಕ್ರಮವನ್ನಾಗಿ ಸೇರಿಸಿ, ಸಂವಿಧಾನ ಪ್ರಾರಂಭವಾದ 10 ವರ್ಷದ ಒಳಗಾಗಿ ಶಿಕ್ಷಣದ ಸಾರ್ವತ್ರೀಕರಣ ಸಾಧಿಸಬೇಕೆಂಬ ಆಶಯವನ್ನು ಹೊಂದಿತ್ತು ಎಂದು ತಿಳಿಸಿದ್ದಾರೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಗುರಿ ಸಾಧಿಸಲು ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಎಲ್ಲಾ ಮಕ್ಕಳಿಗೆ ಶಾಲೆಗಳ ಲಭ್ಯತೆಯನ್ನು ಒದಗಿಸಲು ದೇಶದಾದ್ಯಂತ ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸಲಾಯಿತು. ಶಾಲೆಗಳನ್ನು ಪ್ರಾರಂಭಿಸುವಾಗ ಸರಕಾರದ ಜೊತೆ ಜೊತೆಗೆ ಅನೇಕ ದಾನಿಗಳು, ಪರೋಪಕಾರಿ ಮಹನೀಯರು ಶಾಲೆಗಳನ್ನು ಪ್ರಾರಂಭಿಸಲು ಭೂಮಿ ಹಾಗು ಧನ ಸಹಾಯವನ್ನು ಮಾಡಿದ ಕಾರಣ ದೇಶದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವಿಶೇಷವಾಗಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಿಷ್ಠವಾಗಿ ಕಟ್ಟಿಕೊಳ್ಳಲು ಸಾಧ್ಯವಾಯಿತು. ಕರ್ನಾಟಕ ಇದಕ್ಕೆ ಹೊರತಲ್ಲ ಎಂದು ಹೇಳಿದ್ದಾರೆ.
ಸರಕಾರ ಮತ್ತು ಸಾರ್ವಜನಿಕರ ಪರಿಶ್ರಮ ಹಾಗೂ ನೈಜ ದಾನಿಗಳು – ಪರೋಪಕಾರಿಗಳ ಉದಾರತೆಯಿಂದ ಕಟ್ಟಿಕೊಂಡ ಶಾಲೆಗಳ ಆಸ್ತಿ-ಪಾಸ್ತಿಗಳನ್ನು ಇಂದಿನ ಸರ್ಕಾರ ಮಾರಲು ಮುಂದಾಗಿರುವುದು ಅತ್ಯಂತ ಖಂಡನೀಯ. ರಾಷ್ಟ್ರ ಮಟ್ಟದಲ್ಲಿ ಬಹುತೇಕ ಸಾರ್ವಜನಿಕ ಉದ್ದಿಮೆಗಳನ್ನು ಮತ್ತು ಅವುಗಳಿಗೆ ಸೇರಿದ ಮೌಲ್ಯಯುತ ಆಸ್ತಿಗಳನ್ನು ಮಾರಿದ ನಂತರ ಗ್ರಾಮ, ತಾಲ್ಲೂಕು, ಜಿಲ್ಲೆ ಅದರಲ್ಲೂ ಪ್ರಮುಖ ನಗರಗಳಲ್ಲಿ, ಶಾಲೆಗಳಲ್ಲಿ ಕಡಿಮೆ ಸಂಖ್ಯೆಯ ಮಕ್ಕಳ ನೆಪವೊಡ್ಡಿ ಶಾಲೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ತೆರವುಗೊಳಿಸಿ ಮಾರಾಟಕ್ಕೆ ಮುಂದಾಗಿರುವುದು ಅತ್ಯಂತ ವ್ಯವಸ್ಥಿತ ಹುನ್ನಾರವಾಗಿದೆ. ಸರ್ಕಾರದ ಈ ನಡೆಯನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಈ ನೀತಿಯು, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಭಾಗವಾಗಿದ್ದು, ಶಾಲೆಗಳ ವಿಲೀನದ ಮೂಲಕ ಇದಕ್ಕೆ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಚಿವರಾದ ನಾಗೇಶ್ ರವರು ಕಡಿಮೆ ಮಕ್ಕಳಿರುವ ಸರಿ ಸುಮಾರು 14000 ಶಾಲೆಗಳನ್ನು ವಿಲೀನಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮತ್ತೊಂದು ಪ್ರಸ್ತಾವನೆಯೆಂದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಾರ್ವಜನಿಕ-ಪರೋಪಕಾರಿ ಸಹಭಾಗಿತ್ವದ ಮೂಲಕ ಅಭಿವೃದ್ಧಿಪಡಿಸುವುದಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಜಾಗವನ್ನು ಅದರಲ್ಲೂ ವಿಶೇಷವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಇತ್ಯಾದಿ ನಗರಗಳಲ್ಲಿ ಸರ್ಕಾರದ ಹಾಗು ಸ್ಥಳೀಯ ಸರ್ಕಾರದ ಮಹಾನಗರ ಪಾಲಿಕೆ, ನಗರ ಪಾಲಿಕೆ ,ಪಟ್ಟಣ ಸಭೆ , ಪುರಸಭೆ ಇತ್ಯಾದಿಗಳಿಗೆ ಸೇರಿದ ಸರ್ಕಾರಿ ಶಾಲಾ ಆಸ್ತಿಗಳನ್ನು ಉದ್ಯಮಿಗಳಿಗೆ ಹಾಗು ಸ್ಥಳೀಯ ಬಲಾಢ್ಯರಿಗೆ ಮಾರಾಟ ಮಾಡಲು ಭೂಮಿಕೆ ಸಿದ್ಧಪಡಿಸುವುದು. ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ ಸಮಾನ ಶಾಲೆಗಳನ್ನಾಗಿಸುವ ತನ್ನ ಅಭಿಯಾನದ ಭಾಗವಾಗಿ ಸರ್ಕಾರದ ಮುಂದೆ ಈ ಕೆಳಕಂಡ ಬೇಡಿಕೆಗಳನ್ನು ಮಂಡಿಸುತ್ತದೆ.
ಬೇಡಿಕೆಗಳು ಇಂತಿದೆ...
1. ರಾಜ್ಯದಲ್ಲಿರುವ ಎಲ್ಲಾ 47633 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಾಗು 1233 ಪದವಿಪೂರ್ವ ಕಾಲೇಜುಗಳಿಗೆ ಸರ್ಕಾರ ಹಾಗು ದಾನಿಗಳು ನೀಡಿರುವ ಆಸ್ತಿಯ ಬಗ್ಗೆ ವಿವರವಾದ ಶ್ವೇತಪತ್ರ ಹೊರಡಿಸಬೇಕು.
2. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಾಗು ಪದವಿಪೂರ್ವ ಕಾಲೇಜುಗಳ ಆಸ್ತಿಗೆ ಸಂಬಂಧಿಸಿದಂತೆ ಭೂದಾಖಲೆಗಳಲ್ಲಿರುವ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಿ ಅಗತ್ಯ ಹಕ್ಕುಪತ್ರ ಹಾಗು ಮಾಲೀಕತ್ವದ ಎಲ್ಲಾ ದಾಖಲೆಗಳನ್ನು ನಿಗದಿತ ಕಾಲಮಿತಿಯಲ್ಲಿ ಮಾಡಿಕೊಡಲು, ತಾಲ್ಲೂಕು ತಹಸಿಲ್ದಾರ್, ಮುಖ್ಯೋಪಾಧ್ಯಯ ಪ್ರತಿನಿಧಿಗಳು, ಶಾಲಾ ಎಸ್ ಡಿ ಎಮ್ ಸಿ ಹಾಗು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಪ್ರತಿನಿಧಿಗಳು ಹಾಗು ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಕಾಲಮಿತಿಯಲ್ಲಿ ಕೆಲಸಗಳನ್ನು ಮುಗಿಸುವಂತೆ ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು.
೩. ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆಯನ್ನು ಕೈ ಬಿಟ್ಟು ನೆರೆಹೊರೆಯಲ್ಲಿನ ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ತಂದು ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ ಸಮಾನ ಶಾಲೆಗಳನ್ನಾಗಿಸಲು ಸರ್ಕಾರಿ ಶಾಲೆಗಳ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞರು ಹಾಗು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕರಾದ ನಿರಂಜನಾರಾಧ್ಯ.ವಿ.ಪಿ. ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.