ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ: ಹೈಕೋರ್ಟ್ ಅಸಮಾಧಾನ
Update: 2022-08-20 10:35 IST
ಬೆಂಗಳೂರು: 'ಸರಕಾರಿ ಕಚೇರಿಗಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಇಂದಿನ ದಿನಗಳಲ್ಲಿ ಲಂಚವಿಲ್ಲದೆ ಯಾವುದೇ ಕಡತ ಮುಂದಕ್ಕೆ ಚಲಿಸುವುದಿಲ್ಲ' ಎಂದು ಹೈಕೋರ್ಟ್ (High Court of Karnataka) ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಹಾಯಕ ಎಂಜಿನಿಯರ್ ಬಿ.ಟಿ.ರಾಜು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜಾಮೀನು ನೀಡಲು ನಿರಾಕರಿಸಿದೆ.
ರಾಜು ಅವರು ದೂರುದಾರರ (ಮಂಜು) ಪರವಾಗಿ ಆದೇಶ ನೀಡಲು 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು. ಬಳಿಕ ಚೌಕಾಸಿ ಮಾಡಿ ಕಾಮಗಾರಿ ಪೂರ್ಣಗೊಳಿಸಲು 60 ಲಕ್ಷ ರೂ. ಗೆ ಒಪ್ಪಿಕೊಂಡಿದ್ದರು.
2022ರ ಜೂನ್ 7ರಂದು ಲಂಚದ ಮೊತ್ತದಲ್ಲಿ ಮುಂಗಡವಾಗಿ 5 ಲಕ್ಷ ರೂಪಾಯಿ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.