ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ; ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಎಚ್.ಸಿ.ಮಹದೇವಪ್ಪ ಒತ್ತಾಯ

Update: 2022-08-20 15:48 GMT

ಮೈಸೂರು,ಆ.20: ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಕೊಡಗು ಜಿಲ್ಲೆಯಲ್ಲಿ  ಅತೀವೃಷ್ಟಿ ಅನಾವೃಷ್ಟಿ ಯಿಂದ ಉಂಟಾದ ಪರಿಸ್ಥಿತಿ ಅವಲೋಕಿಸಲು ಹೋದಂತಹ ಸಂದರ್ಭದಲ್ಲಿ ಮೊಟ್ಟೆ ಎಸೆದಿರುವ ಪ್ರಕರಣದ ತನಿಖೆಯನ್ನು ಹಾಲಿ ನ್ಯಾಯಾಧೀಶರ ಸಮಿತಿಗೆ ವಹಿಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೆಕು ಎಂದು ಮಾಜಿ ಸಚಿವ  ಡಾ.ಎಚ್.ಸಿ.ಮಹದೇವಪ್ಪ ಒತ್ತಾಯಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಘಟನೆ ಸರ್ಕಾರದ ಕುಮ್ಮಕ್ಕಿನಿಂದಲೇ ನಡೆದಿದೆ. ಇಂತಹ ದಾಳಿಗಳಿಗೆ ಕಾಂಗ್ರೆಸ್ ಪಕ್ಷವಾಗಲಿ ಸಿದ್ಧರಾಮಯ್ಯ ಅವರಾಗಲಿ ಬಗ್ಗುವುದಿಲ್ಲ ಜಗ್ಗುವುದಿಲ್ಲ ಎಂದು ಗುಡುಗಿದರು.

ರಾಜ್ಯ ಸರ್ಕಾರದ ವರ್ಚಸ್ಸು ದಿನೇ ದಿನೇ ಕುಸಿಯುತ್ತಿದೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಅಮೃತ ಮಹೋತ್ಸವ ಕಂಡು ಬಿಜೆಪಿಯವರಿಗೆ ನಡುಕ ಉಂಟಾಗಿದೆ. ಅವರ ಅಭಿವೃದ್ಧಿ ಶೂನ್ಯವಾಗಿದೆ. ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಮಿತಿಮೀರಿದೆ. ಇದನ್ನೆಲ್ಲಾ ಮರೆಮಾಚಲು ಸಿದ್ಧರಾಮಯ್ಯ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಕಿಡಿಕಾರಿದರು.

ಕೊಡಗು ಜಿಲ್ಲೆಯಲ್ಲಿ ಅತೀವೃಷ್ಟಿ ಅನಾವೃಷ್ಟಿ ವೀಕ್ಷಿಸುವ ಸಂಬಂಧ ಜಿಲ್ಲಾಡಳಿತಕ್ಕೆ ಮೊದಲೆ ಮಾಹಿತಿ ಇತ್ತು, ಆದರೆ ಅವರು ಭದ್ರತೆ ಒದಗಿಸಲಿಲ್ಲ, ಸಿದ್ಧರಾಮಯ್ಯ ಅವರಿಗೆ ವ್ಯಕ್ತಿಯಾಗಿ ಭದ್ರತೆ ನೀಡಬೇಕಿರಲಿಲ್ಲ ಸಂವಿಧಾನಾತ್ಮಕವಾಗಿ ಅವರು ಹೊಂದಿರುವ ಹುದ್ಧೆಗೆ ಗೌರವ ಕೊಟ್ಟು ಭದ್ರತೆ ನೀಡಬೇಕಿತ್ತು ಎಂದು ಹೇಳಿದರು.

ಸರ್ಕಾರ ನಡೆಯುತ್ತಿಲ್ಲ,  ಮ್ಯಾನೇಜ್ ಮಾಡಲಾಗುತ್ತಿದೆ ಎಂದು ಅವರ ಪಕ್ಷದ ಸಚಿವರೇ ಹೇಳಿದ್ದಾರೆ. ಇದೆಲ್ಲಾ ಕಾರಣದಿಂದಾಗಿ ಸಿದ್ದರಾಮಯ್ಯ ಸರ್ಕಾರವನ್ನು ಜನರು ಮೆಲುಕು ಹಾಕುತ್ತಿದ್ದಾರೆ. ಹಾಗಾಗಿ ಜನರ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ತನ್ನ ಅಂಗ ಸಂಸ್ಥೆಗಳ ಮೂಲಕ ಈ ರೀತಿಯ ಕೆಲಸಗಳನ್ನು ಮಾಡಿಸುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಮೇಲೆಯೇ ಮೊಟ್ಟೆ ಎಸೆಯುತ್ತಾರೆ ಎಂದರೆ ಬಿಜೆಪಿಯವರು ಕರ್ನಾಟಕವನ್ನು ಎಂತಹ ಮಟ್ಟಕ್ಕೆ ಕೊಂಡಿಯ್ದಿದ್ದಾರೆ. ಆ ಪಕ್ಷದವರ ಸಂಸ್ಕೃತಿ ಎಂತಹದು ಎಂದು ಇದರಲ್ಲೇ ತಿಳಿಯುತ್ತದೆ ಎಂದು ಹೇಳಿದರು.

ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ವ್ಯವಸ್ಥೆಯೂ ಕಣ್ಣುಮುಚ್ಚಿ ಕುಳಿತಿದೆ. ಪಟ್ಟಭದ್ರ ಹಾಗೂ ಕೋಮುವಾದಿಗಳ ಕೈಗೊಂಬೆಯಾಗಿ ಕೆಲಸ ಮಾಡಿದೆ. ಇದನ್ನೆಲ್ಲಾ ಗಮನಿಸಿದರೆ ಸರ್ಕಾರದ ಕುಮ್ಮಕ್ಕು ಎದ್ದುಕಾಣುತ್ತಿದೆ. ಹಾಗಾಗಿ ಈ ಪ್ರಕರಣವನ್ನು ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯರುಗಳಾದ ಎನ್.ಭಾಸ್ಕರ್, ಹೆಡತಲೆ ಮಂಜುನಾಥ್, ಹುಣಸೂರು ಬಸವಣ್ಣ, ಶಿವಣ್ಣ, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News