ನಾನು ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ: ಸಿ.ಟಿ.ರವಿ

Update: 2022-08-20 18:16 GMT

ಚಿಕ್ಕಮಗಳೂರು, ಆ.20: ಮುಖ್ಯಮಂತ್ರಿ ವಿಚಾರದಲ್ಲಿ ಗೊಂದಲ ಬೇಡ, ಸದ್ಯಕ್ಕೆ ಬಸವರಾಜ ಬೊಮ್ಮಾಯಿಯೇ ನಮ್ಮ ರಾಜ್ಯದ ಮುಖ್ಯಮಂತ್ರಿ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ಶನಿವಾರ ಕಡೂರು ತಾಲೂಕಿನ ದೇವನೂರು ಕೆರೆಗೆ ಬಾಗಿನ ಅರ್ಪಿಸಿ ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಕ್ಷದ ಮುಖಂಡರೊಬ್ಬರು ಸಿ.ಟಿ.ರವಿ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ವಿಚಾರದಲ್ಲಿ ಯಾರೂ ಗೊಂದಲ ಹುಟ್ಟು ಹಾಕುವುದು ಬೇಡ. ಸದ್ಯಕ್ಕೆ ಬಸವರಾಜ ಬೊಮ್ಮಾಯಿ ಅವರೇ ನಮ್ಮ ಮುಖ್ಯಮಂತ್ರಿ. ಅವರ ಮಾರ್ಗದರ್ಶನದಲ್ಲೇ ಎಲ್ಲರೂ ಕೆಲಸ ಮಾಡಿಕೊಂಡು ಹೋಗೋಣ. ಭಗವಂತ ಯಾರ ಹಣೆಯಲ್ಲಿ ಏನು ಬರೆದಿದ್ದಾನೋ ಗೊತ್ತಿಲ್ಲ. ಭಗವಂತ£ ಕೃಪೆ ತೋರಿದರೆ ಅದೂ ಕೂಡ ಆಗುತ್ತೆ. ರಾಜ್ಯಕ್ಕೆ ಬಿಜೆಪಿ ಬೇಕು, ದೇಶಕ್ಕೂ ಬಿಜೆಪಿ ಬೇಕು. ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಕೆಲಸಕ್ಕೆ ಜನ ಆಶೀರ್ವಾದ ಮಾಡಿ ಬಿಜೆಪಿಯನ್ನು ಗೆಲ್ಲಿಸಿ ಎಂದರು.

ನಾನು ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ. ಕೇವಲ ತತ್ವ, ಸಿದ್ಧಾಂತಕ್ಕಾಗಿ ಬಾವುಟ ಹಿಡಿದು ರಾಜಕೀಯಕ್ಕೆ ಬಂದವನು. ತತ್ವವೇ ನನ್ನನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಹುದ್ದೆಯವರೆಗೂ ಕರೆದುಕೊಂಡು ಹೋಗಿದೆ. ಆ ಒಂದು ನೆಲೆಯನ್ನು ನನಗೆ ಕಲ್ಪಿಸಿಕೊಟ್ಟಿದೆ. ನಾನು ಬಿಜೆಗೆ ಬಂದಂತಹ ಸಂದರ್ಭದಲ್ಲಿ ನಮ್ಮೂರಿನಲ್ಲಿ ಒಬ್ಬ ಗ್ರಾ.ಪಂ. ಸದಸ್ಯನೂ ಕೂಡಾ ಬಿಜೆಪಿ ಪಕ್ಷದವರಿರಲಿಲ್ಲ. ಹಿಂದುತ್ವ, ತತ್ವ ನನ್ನನ್ನು ಬಿಜೆಪಿಯನ್ನು ಬೆಳೆಸುತ್ತಿದೆ ಎಂದರು.

ನೀರಾವರಿ ವಿಚಾರವಾಗಿ ಮಾತನಾಡಿದ ಅವರು, ಎದೆ ಬಗೆದು ತೋರಿಲು ಇದು ತ್ರೇತಾಯುಗವಲ್ಲ ಕಲಿಯುಗ. 2014ರಲ್ಲಿ ಕಡೂರಿನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿಗೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನು ಮೂರೇ ತಿಂಗಳಲ್ಲಿ ನೀರಾವರಿ ಕೆಲಸ ಮುಗಿಸಿ ಕೆರೆಗೆ ನೀರು ಹರಿಸಲಾಗುವುದು ಎಂದು ಹೇಳಿದ್ದರು ಆದರೆ ಮತ್ತೆ ಆ ಕೆಲಸ ಆಗಲು ಬಿಜೆಪಿ ಸರಕಾರವೇ ಬರಬೇಕಾಯ್ತು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ನಾನು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವ ಆಗುತ್ತೇನೆ ಎಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ನನ್ನನ್ನು ಜಿಲ್ಲೆಯ ಉಸ್ತುವಾರಿ ಸಚಿವನನ್ನಾಗಿ ಮಾಡಿದ್ದೇ ಸಿ.ಟಿ.ರವಿ. ಅದಕ್ಕಾಗಿ ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಇದೇ ತಿಂಗಳಲ್ಲಿ 2 ಬಾರಿ ಜಿಲ್ಲೆಗೆ ಬಂದು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಇಂದು ದೇವನೂರು ಕೆರೆಗೆ ಬಾಗಿನ ಅರ್ಪಿಸಿದ್ದು, ನನಗೆ ಬಹಳ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಯಳನಡು ಮಾಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಮಹಾ ಸ್ವಾಮಿಗಳು, ಜಿಪಂ ಮಾಜಿ ಉಪಾಧ್ಯಕ್ಷ ಜಿ.ಎನ್.ವಿಜಯ್ ಕುಮಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಕಲ್ಮರುಡಪ್ಪ, ಈಶ್ವರಹಳ್ಳಿ ಮಹೇಶ್, ರವೀಂದ್ರ ಬೆಳವಾಡಿ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷ ಷಣ್ಮುಖಪ್ಪ, ಮಾಜಿ ಅಧ್ಯಕ್ಷ ಆನಂದ್, ಸದಸ್ಯರಾದ ಮನು ಬೋಳನಹಳ್ಳಿ, ಡಿ.ಎ ಮಂಜುನಾಥ್, ಮಂಜುನಾಥ್ ಎಸ್.ಕೊಪ್ಪಲು, ಚಟ್ನಳ್ಳಿ ಮಹೇಶ್, ನಾಗರಾಳು ಗ್ರಾ.ಪಂ ಅಧ್ಯಕ್ಷ ಚೇತನ್, ವಿಎಸ್‍ಎಸ್‍ಎನ್ ಅಧ್ಯಕ್ಷ ರವಿ ಕಾರೇಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News