ಜನಪರ, ಶೋಷಿತರ ಪರ ಧ್ವನಿ ಎತ್ತುವವರ ಮೇಲೆ ದಾಳಿ ಸಾಮಾನ್ಯ, ಎದುರಿಸುವ ಶಕ್ತಿ ಕಾಂಗ್ರೆಸ್ ಗೆ ಇದೆ: ಯು.ಟಿ. ಖಾದರ್

Update: 2022-08-21 12:41 GMT

ದಾವಣಗೆರೆ : 'ಬಿಜೆಪಿ ನಡೆಸಿರುವ ಅಂತರಿಕ ಸಮೀಕ್ಷೆ ಪ್ರಕಾರವೇ ಮುಂದಿನ ಚುನಾವಣೆಯಲ್ಲಿ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬುವುದು ಗೊತ್ತಾಗಿದೆ. ಹೀಗಾಗಿಯೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯುವುದು ಸೇರಿದಂತೆ ಹಲವು ದುಷ್ಕೃತ್ಯಗಳಿಗೆ ಸರ್ಕಾರವೇ ಪ್ರೇರಣೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿ, ತಮ್ಮ  ಆಡಳಿತ ವೈಫಲ್ಯವನ್ನು ಮರೆ ಮಾಚುತ್ತಿದೆ' ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆರೋಪಿಸಿದರು.

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಮಡಿಕೇರಿಯಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಪೂರ್ವನಿಯೋಜಿತ ಕೃತ್ಯವಾಗಿದ್ದು, ಇದು ವೈಚಾರಿಕತೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ದಾಳಿಯಾಗಿದೆ' ಎಂದರು.

'ಜನಪರ ಮತ್ತು ಶೋಷಿತರ ಪರ ಧ್ವನಿ ಎತ್ತುವವರ ಮೇಲೆ ದಾಳಿ ನಡೆಯುವುದು ಸಾಮಾನ್ಯ. ಅದನ್ನು ಎದುರಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಾಗ ಪೊಲೀಸರು ಏನು ಮಾಡುತ್ತಿದ್ದರು. ಅವರ ಕೈಯಲ್ಲಿ ಲಾಠಿ ಇರುವುದು ಏತಕ್ಕೆ. ಆ ಲಾಠಿ ಬಳಸಿ ಕಿಡಿಕೇಡಿಗಳನ್ನು ಓಡಿಸಬೇಕೋ ಬೇಡವೋ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಪೊಲೀಸರು ಕೆಲಸ ಮಾಡಲು ಮುಕ್ತ ಅವಕಾಶ ಕೊಡುತ್ತಿಲ್ಲ. ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದೆ. ಮೊಟ್ಟೆ ಎಸೆದ ವ್ಯಕ್ತಿ ಸಂಪತ್‍ಗೆ ಹೇಗೆ ಎಸೆಯಬೇಕು ಅನ್ನುವುದರ ಬಗ್ಗೆ ತರಬೇತಿ ನೀಡಲಾಗಿದ್ದು, ಇದೊಂದು ಪೂರ್ವನಿಯೋಜಿತ ಕೃತ್ಯ. ಆತ ನೂರಕ್ಕೆ ನೂರು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಯ ಕಾರ್ಯಕರ್ತ. ಆದರೆ, ಜನರಲ್ಲಿ ಗೊಂದಲ ಸೃಷ್ಟಿಸುವುದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸಲಾಗುತ್ತಿದೆ' ಎಂದು ಹೇಳಿದರು.

'ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಆಗಸ್ಟ್ 26ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಮಡಿಕೇರಿ ಜನರು ಧೈರ್ಯಶಾಲಿಗಳು, ಅವರು ಭಯ ಪಡುವವರಲ್ಲ. ಕಾಂಗ್ರೆಸ್ ಎಂದಿಗೂ ಸಹ ಆಶಾಂತಿ ಸೃಷ್ಟಿಸುವ ಕೆಲಸ ಮಾಡುವುದಿಲ್ಲ. ಪ್ರಜಾಪ್ರಭುತ್ವದ ಆಶಯದಂತೆ ಹೋರಾಟ ಮಾಡುತ್ತೇವೆ. ಯಾರು ಹೆದರಬೇಕಾದ ಅವಶ್ಯಕತೆ ಇಲ್ಲ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News