ವಿಧಾನಸೌಧ ಈಗ ಖರೀದಿ-ಮಾರಾಟದ ‘ವ್ಯಾಪಾರ ಸೌಧ': ಕಾಂಗ್ರೆಸ್ ಆಕ್ರೋಶ

Update: 2022-08-21 12:50 GMT

ಬೆಂಗಳೂರು, ಆ. 21: ‘ಶಾಸಕರ ಖರೀದಿಯಿಂದ ರಚನೆಯಾದ ಶೇ.40ರಷ್ಟು ಕಮಿಷನ್ ಸರಕಾರದಲ್ಲಿ ಎಲ್ಲವೂ ಖರೀದಿ ವ್ಯವಹಾರವೇ!ವಿಧಾನಸೌಧ ಈಗ ಖರೀದಿ, ಮಾರಾಟಗಳು ನಡೆಯುವ ‘ವ್ಯಾಪಾರ ಸೌಧ'ವಾಗಿ ಮಾರ್ಪಟ್ಟಿದೆ. ಪ್ರತಿ ಇಲಾಖೆಯ ನೇಮಕಾತಿಯಲ್ಲೂ ಕೋಟಿ ಕೋಟಿ ರೂ.ವ್ಯವಹಾರ ನಡೆಯುತ್ತಿದೆ, ಈ ಎಲ್ಲ್ಲ ಅಕ್ರಮಗಳು ಮಂತ್ರಿಗಳ ಕಮಿಷನ್ ಇಲ್ಲದೆ ನಡೆಯಲು ಸಾಧ್ಯವಿಲ್ಲವೆನ್ನುವುದು ಸತ್ಯ' ಎಂದು ಕಾಂಗ್ರೆಸ್ (Karnataka Pradesh Congress Committee) ಆಕ್ರೋಶ ವ್ಯಕ್ತಪಡಿಸಿದೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶೇ.40ರಷ್ಟು ಕಮಿಷನ್ ಸರಕಾರದಲ್ಲಿ ಸರಕಾರಿ ಹುದ್ದೆಗಳು ಸಂತೆಯ ತರಕಾರಿಗಳಂತೆ ಮಾರಾಟವಾಗುತ್ತಿವೆ. ಪಿಎಸ್ಸೈನಿಂದ ಹಿಡಿದು ಶಿಕ್ಷಕರವರೆಗೂ ಪ್ರತಿಯೊಂದು ನೇಮಕಾತಿಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬರುತ್ತಿವೆ. ತನ್ನ ಭ್ರಷ್ಟಾಚಾರದಿಂದ ಅರ್ಹ ಯುವ ಸಮುದಾಯಕ್ಕೆ ಉದ್ಯೋಗ ವಂಚಿಸುತ್ತಿರುವ ಬಿಜೆಪಿ ಸರಕಾರ ಯುವಕರ ಭವಿಷ್ಯವನ್ನು ಹಾಳುಗೆಡವಿದೆ' ಎಂದು ದೂರಿದೆ.

‘ಶೇ.40ರಷ್ಟು ಕಮಿಷನ್ ಸರಕಾರದಲ್ಲಿ ಭ್ರಷ್ಟಾಚಾರವು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆ.ವಿಧಾನಸೌಧದ ಗೋಡೆಗಳಿಂದ ಹಿಡಿದು ಗ್ರಾಮ ಮಟ್ಟದ ಕಚೇರಿಯ ಕುರ್ಚಿಗಳವರೆಗೂ ಹಣ ಕೇಳುತ್ತವೆ!‘ಹಣ ನೀಡದಿದ್ದರೆ ಕಡತಗಳು ಕದಲುವುದಿಲ್ಲ' ಎಂಬ ಹೈಕೋರ್ಟಿನ ಹೇಳಿಕೆ ಸರಕಾರದ ಆಡಳಿತದಲ್ಲಿನ ‘ಬಿಜೆಪಿ ಭ್ರಷ್ಟೋತ್ಸವ' ಮಾಡಿದ ಕಪಾಳಮೋಕ್ಷ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮಾತೆತ್ತಿದರೆ ಕಾಂಗ್ರೆಸ್‍ನವರ, ಸಿದ್ದರಾಮಯ್ಯರವರ, ಡಿ.ಕೆ ಶಿವಕುಮಾರ್‍ರವರ ಸರ್ಟಿಫಿಕೇಟ್ ಬೇಕಿಲ್ಲ ಎನ್ನುತ್ತಿದ್ದರು. ಬಿಜೆಪಿಯ ಸುರೇಶ್ ಗೌಡ, ಬಸನಗೌಡ ಪಾಟೀಲ್ ಯತ್ನಾಳ್, ಮಾಧುಸ್ವಾಮಿಯವರಲ್ಲದೆ ಈಗ ನಿಮ್ಮದೇ ಶಾಸಕ ನೆಹರೂ ಒಲೆಕಾರ್ ಅವರು ಸರ್ಟಿಫಿಕೇಟ್‍ಗೂ ಮೀರಿ ಕಪ್ಪು ಬಾವುಟವನ್ನೇ ಕೊಡ್ತಿದ್ದಾರೆ.ಇದು ನಿಮ್ಮ ಆಡಳಿತದ ಫಲವಲ್ಲದೆ ಇನ್ನೇನು?' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News