ಉದ್ಯಮಿ ಹತ್ಯೆ ಪ್ರಕರಣ: ಭೂಗತ ಪಾತಕಿ ರವಿ ಪೂಜಾರಿ ಖುಲಾಸೆ

Update: 2022-08-22 11:29 GMT
(ರವಿ ಪೂಜಾರಿ)

ಬೆಂಗಳೂರು, ಆ.22: ಎರಡು ದಶಕಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಭೂಗತಪಾತಕಿ ರವಿ ಪೂಜಾರಿಯನ್ನು ನಗರದ ವಿಶೇಷ ಕೋರ್ಟ್, ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ಬಿಲ್ಡರ್ ಸುಬ್ಬರಾಜು ಅವರನ್ನು 2001ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂನ ಅವರ ಕಚೇರಿಯಲ್ಲೇ ಹತ್ಯೆ ಮಾಡಲಾಗಿತ್ತು. ಈ ಕೇಸ್‌ನಲ್ಲಿ ರವಿ ಪೂಜಾರಿಯನ್ನು ಆರೋಪಿಯಾಗಿಸಲಾಗಿತ್ತು.

ಬೆಂಗಳೂರಿನಲ್ಲಿ ಪ್ರತಿಷ್ಠಿತ ಪ್ರದೇಶದಲ್ಲಿ ಸುಬ್ಬರಾಜು ಆಸ್ತಿ ಖರೀದಿಸಲು ಮುಂದಾಗಿದ್ದರು. ಆಗ ಮುತ್ತಪ್ಪ ರೈ ಅವರಿಂದ ಸುಬ್ಬರಾಜುಗೆ ಬೆದರಿಕೆ ಇತ್ತು ಎನ್ನಲಾಗಿದೆ. ರವಿ ಪೂಜಾರಿ ಮತ್ತಿತರರನ್ನು ಬಳಸಿ ಮುತ್ತಪ್ಪ ರೈ ಸುಬ್ಬರಾಜುವಿನ ಹತ್ಯೆ ಮಾಡಿಸಿದ್ದ ಎಂಬ ಆರೋಪ ಇದೆ.

ರವಿ ಪೂಜಾರಿ ಇತರ ಏಳು ಮಂದಿ ಜೊತೆ ಸೇರಿ ಸುಬ್ಬರಾಜು ಹತ್ಯೆಗೆ ಸಂಚು ರೂಪಿಸಿದ್ದ. ಯೂಸುಫ್ ಬಚಕಾನ ಮತ್ತು ನಿತಿನ್ ಸಾವಂತ್ ಎಂಬಿಬ್ಬರು ಶೂಟರ್‌ಗಳನ್ನು ನೇಮಿಸಲಾಗಿತ್ತು. ಈ ಇಬ್ಬರು ಶೂಟರ್‌ಗಳಿಗೆ ಹವಾಲಾ ಜಾಲದ ಮೂಲಕ ಪಿಸ್ತೂಲು ಹಾಗೂ ಗುಂಡುಗಳನ್ನು ರವಿ ಪೂಜಾರಿ ಪೂರೈಸಿದ್ದ ಎಂದು ಆರೋಪಿಸಲಾಗಿತ್ತು.

ಈ ಹಿಂದೆ ನಡೆದ ವಿಚಾರಣೆ ವೇಳೆ ಮುತ್ತಪ್ಪ ರೈ ಹಾಗೂ ಇತರ ನಾಲ್ವರನ್ನು ಸಾಕ್ಷ್ಯಾಧಾರ ಕೊರತೆಯಿಂದ ಕೋರ್ಟ್ ಖುಲಾಸೆಗೊಳಿಸಿತ್ತು. ಈ ಪ್ರಕರಣದಲ್ಲಿ ಶೂಟರ್ ಯೂಸುಫ್ ಬಚಕಾನಗೆ ಮಾತ್ರ ಶಿಕ್ಷೆಯಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2020 ಮಾ.10ರಂದು ವೈಯಾಲಿಕಾವಲ್ ಪೊಲೀಸ್ ಇನ್ಸ್ಪೆಕ್ಟರ್ ಯೋಗೇಂದ್ರ ಕುಮಾರ್ ಅವರು ರವಿ ಪೂಜಾರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿದ್ದರು. ಅದನ್ನು ಸಾಕ್ಷಿಯಾಗಿ ಕೋರ್ಟ್ಗೆ ನೀಡಲಾಗಿತ್ತು. ಆದರೆ, ಪೊಲೀಸರಿಗೆ ನೀಡಿದ್ದ ತಪ್ಪೊಪ್ಪಿಗೆಯು ಕೋರ್ಟ್ನಲ್ಲಿ ಸಾಕ್ಷಿ ಎಂದು ಪರಿಗಣಿಸಬಾರದು ಎಂದು ಪೂಜಾರಿ ಪರ ವಕೀಲರು ವಾದಿಸಿದ್ದರು.

ಇದನ್ನೂ ಓದಿ:  ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಸಂಪತ್‌ಗೆ ಅಭಿನಂದನೆ ಸಲ್ಲಿಸುತ್ತೇನೆ: BJP ಶಾಸಕ ಯತ್ನಾಳ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News