×
Ad

ರಾಜ್ಯದಲ್ಲಿ 4,055 ಮಂದಿಗೆ ಡೆಂಗಿ; ಎಂಟು ಮಂದಿ ಮೃತ್ಯು

Update: 2022-08-22 18:04 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.22: ರಾಜ್ಯದೆಲ್ಲೆಡೆ ಹರಡುತ್ತಿರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಜೊತೆ ನಗರಾಭಿವೃದ್ಧಿ ಇಲಾಖೆ ಕೈಜೋಡಿಸಬೇಕು ಎಂದು ರಾಜ್ಯ ಸರಕಾರ ಆದೇಶಿಸಿದೆ. ರಾಜ್ಯದಲ್ಲಿ ಇದುವರೆಗೂ 4,055 ಮಂದಿ ಡೆಂಗಿಜ್ವರದಿಂದ (Dengue fever) ಬಳಲುತ್ತಿದ್ದು, ಅವರ ಪೈಕಿ ರೋಗದಿಂದ ಮುಕ್ತರಾಗದೇ 8 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಪರೀತ ಮಳೆ ಹಾಗು ಹವಾಮಾನ ವೈಪರೀತ್ಯದಿಂದಾಗಿ ಡೆಂಗಿರೋಗಕ್ಕೆ ಕಾರಣವಾಗಿರುವ ಈಡಿಸ್ ಈಜಿಪ್ಪಿ ಸೊಳ್ಳೆಗಳ ಉತ್ಪತ್ತಿ  ಹೆಚ್ಚಾಗುತ್ತಿರುವುದರಿಂದ ಎಲ್ಲೆಡೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಆರೋಗ್ಯ ಇಲಾಖೆಯೊಂದಿಗೆ ನಗರಾಭಿವೃದ್ಧಿ ಇಲಾಖೆ ಕೈ ಜೊಡಿಸಿ ಸೊಳ್ಳೆ ಕಾಟ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಏನು ಮಾಡಬೇಕು?: ಸಾಂಕ್ರಾಮಿಕ ರೋಗದಿಂದ ಬಚಾವಾಗಬೇಕಾದರೆ ಕೆಲವು ಮುನ್ಸೂಚನೆಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ. ಕುಡಿಯುವ ನೀರಿನ ಸಮರ್ಪಕ ಸರಬರಾಜು ಹಾಗು ನಿರ್ವಹಣೆ ಮಾಡಬೇಕು. ನಿರುಪಯುಕ್ತ ಹಾಗು ಘನತ್ಯಾಜ್ಯ ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು.

ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ಸಂಗ್ರಹ ತಡೆಗಟ್ಟಲು ಮಾಲಕರಿಗೆ ಸೂಚನೆ ನೀಡಲಾಗಿದೆ. ಮನೆ ಮುಂದೆ ಕಲುಷಿತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಉತ್ಪಾದನಾ ಕೇಂದ್ರಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡುವುದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಹೂ ಕುಂಡಗಳಲ್ಲಿ, ತೆಂಗಿನ ಚಿಪ್ಪು ಮತ್ತಿತರ ಸ್ಥಳಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತುರ್ತು ಸಂದರ್ಭಗಳಲ್ಲಿ ಇಂಡೋರ್ ಸ್ಪೇಸ್ ಸ್ಪ್ರೆ ಬಳಸುವಂತೆ ಸಲಹೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News