ಬಂಜಾರರ ಧಾರ್ಮಿಕ ಕ್ಷೇತ್ರದಲ್ಲಿ RSS ಶಿಬಿರ ನಡೆದಲ್ಲಿ ತಡೆಯುತ್ತೇವೆ: ಮುಖಂಡರ ಎಚ್ಚರಿಕೆ
ದಾವಣಗೆರೆ, ಆ.22 : ಹೊನ್ನಾಳ್ಳಿ ತಾಲೂಕಿನ ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪದ ಭಾಯಾಗಡದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಶಿಬಿರಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ನಡೆದ ಸ್ವಾಭಿಮಾನಿ ಬಂಜಾರರ ಸಮಾವೇಶ ಯಶಸ್ವಿಯಾಯಿತು.
ಈ ಸಮಾವೇಶದಲ್ಲಿ ರಾಜ್ಯದ 53 ಬಂಜಾರ ಸಂಘಟನೆಗಳ ಮುಖಂಡರು,ಬಂಜಾರ ಸ್ವಾಮೀಜಿಗಳು, ಚಿಂತಕರು ಭಾಗವಹಿಸಿದ್ದರು.
ಶಿಕಾರಿಪುರದ ರಾಘವೇಂದ್ರ ನಾಯ್ಕ ಮಾತನಾಡಿ, ವಿರೋಧದ ಮಧ್ಯೆ ಏನಾದರೂ ಆರೆಸ್ಸೆಸ್ ಶಿಬಿರ ಇಲ್ಲಿ ನಡೆದಲ್ಲಿ ಆದನ್ನು ಸಾವಿರಾರು ಯುವಜನರು ಸೇರಿ ತಡೆಯುತ್ತೇವೆ. ಅದಕ್ಕಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಅಮೆರಿಕದ ಹೃದ್ರೋಗ ತಜ್ಞ ವೈದ್ಯರು ಡಾ ಗಿರೀಶ್ ಮೂಡ್ ಮಾತನಾಡಿ, ಸಂಕುಚಿತವಾದದ ಅಪಾಯಗಳನ್ನು ಜಾಗತಿಕ ದೃಷ್ಟಿಕೋನದಲ್ಲಿ ನೋಡಬೇಕು. ತಳಸಮುದಾಯಗಳ ಯುವಜನರು ಆ ಸಂಘದಿಂದ ದೂರ ಇರಬೇಕು ಎಂದರು.
ಹೈಕೋರ್ಟ್ ನ್ಯಾಯವಾದಿ ಎನ್ ಅನಂತನಾಯ್ಕ ಮಾತನಾಡಿ, ಬಂಜಾರರ ಅಸ್ಮಿತೆಯ ಧಾರ್ಮಿಕ ಕೇಂದ್ರವನ್ನುಆರ್‍ಎಸ್‍ಎಸ್ ಶಿಬಿರಕ್ಕೆ ನೀಡಬಾರದು. ಏಕೆ ಕೊಡುವುದನ್ನು ವಿರೋಧಿಸುತ್ತೇವೆ ಎನ್ನುವುದನ್ನು ಮಂಡಿಸಿದರು.
ಬಂಜಾರರ ಅಭಿವೃದ್ಧಿ ಸಾಂವಿಧಾನಿಕ ಅವಕಾಶಗಳಿಂದ ಮಾತ್ರ ಸಾಧ್ಯ. ನಾವು ಸೇವಾಲಾಲ್, ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗೋಣ. ಸಂಘಪರಿವಾದ ಕಾರ್ಯಕ್ರಮಗಳನ್ನು ಬಹಿಷ್ಕರಿಸೋಣ ಎಂದು ಯುವ ಚಿಂತಕ ರುದ್ರು ಪುನೀತ್ ಕರೆ ನೀಡಿದರು.
ಚಿಂತಕ ಡಾ ರಾಜನಾಯ್ಕ, ಡಾ ಸಣ್ಣರಾಮ, ಡಾ ಇಂದ್ರಾನಾಯ್ಕ, ಪ್ರೊ. ನಂಜ್ಯಾನಾಯ್ಕ, ಶೈಲಾಬಾಯಿ, ಲಕ್ಷ್ಮಣ ರಾಮಾವತ್, ಲಿಂಗಾನಾಯ್ಕ, ತಿಪ್ಪ ಸರ್ ನಾಯ್ಕ, ಮಂಜ್ಯಾನಾಯ್ಕ, ರೇಷ್ಮಾಬಾಯಿ, ಸೇರಿದಂತೆ ಅನೇಕರು ಪ್ರತಿನಿಧಿ ಅಧಿವೇಶನದಲ್ಲಿ ಮಾತನಾಡಿದರು.
ಬಂಜಾರರ ಬೋಗ್, ವಿತೀ ಮೂಲಕ ಸಮಾವೇಶ ಉದ್ಘಾಟನೆಗೊಂಡಿತು.
ಮಹಾಮಠ ಸಮಿತಿಯ ಅಧ್ಯಕ್ಷ ರುದ್ರಪ್ಪ ಲಮಾಣಿ ಭಾಗವಹಿಸಿದ್ದರು. ಮಹಾಮಠ ಸಮಿತಿಯ ಪರವಾಗಿ ಡಾ ಈಶ್ವರ ನಾಯ್ಕ ಸಮಾವೇಶದ ಹಕ್ಕೊತ್ತಾಯಗಳನ್ನು ಸ್ವೀಕರಿಸಿದರು.
ಕೈಗೊಂಡಿರುವ ನಿರ್ಣಯಗಳು
1. ಬಾಯಾಗಡ್ ಕ್ಷೇತ್ರದಲ್ಲಿ ಸೇವಾಲಾಲ್ -ಮರಿಯಮ್ಮಾ ಅವರ *ಬಿಳಿಕೆಂಪು* ಧ್ವಜ ಮತ್ತು ನಮ್ಮ ರಾಷ್ಟ್ರೀಯ ಧ್ವಜ ಮಾತ್ರ ಹಾರಾಡಬೇಕು. ಇನ್ಯಾವುದೇ ಧ್ವಜ ಹಾರಾಟಕ್ಕೆ ಅವಕಾಶ ಇರಬಾರದು.
2. ಮಹಾಮಠ ಸಮಿತಿಯ ಪರವಾನಿಗೆ ಇಲ್ಲದೇ ಕರಪತ್ರ ಮುದ್ರಿಸಿ ಪ್ರಚಾರ ಮಾಡಿದ ತಪ್ಪಿಗಾಗಿ ಆರ್‍ಎಸ್‍ಎಸ್ ಬಂಜಾರ ಸಮುದಾಯದ ಕ್ಷಮೆ ಯಾಚಿಸಬೇಕು. ಶಿಬಿರ ನಡೆಸಲು ಅವಕಾಶ ಕೋರಿಆರ್‍ಎಸ್‍ಎಸ್ ನೀಡಿರುವ ಪತ್ರವನ್ನು ತಿರಸ್ಕರಿಸಬೇಕು.
3. ಸಂತ ಸೇವಾಲಾಲ್ ಅವರ ಜನ್ಮಸ್ಥಳ ಭಾಯಾಗಡವನ್ನು ಪಕ್ಷ ರಾಜಕೀಯದಿಂದ ಮುಕ್ತಗೊಳಿಸಬೇಕು. ರಾಜಕೀಯ ಪಕ್ಷಗಳ ಮುಖಂಡರು ಅಲ್ಲಿಗೆ ಕೇವಲ ಭಕ್ತರಾಗಿ ಆಗಮಿಸಿ ಪ್ರಾರ್ಥನೆ ಮತ್ತು ಸೇವೆ ಸಲ್ಲಿಸಿ ಹೋಗುವಂತೆ ನಿಯಮ ರೂಪಿಸಬೇಕು.
4. ಭಾಯಾಗಡ್ ವಿಶ್ವ ಬಂಜಾರರ ಪರಮೋಚ್ಚ ಧಾರ್ಮಿಕ ಕೇಂದ್ರ. ಇದರ ಜೊತೆಗೆ ಸರ್ಕಾರದ ಯಾವುದೇ ಇಲಾಖೆ, ತಾಂಡ ಅಭಿವೃದ್ಧಿ ನಿಗಮ, ಬಂಜಾರ ಅಕಾಡೆಮಿ ಸೇರಿದಂತೆ ಯಾವುದೇ ಸಂಸ್ಥೆಗಳು ಲಿಖಿತ ಪತ್ರ, ಆದೇಶಗಳು ಮೂಲಕ ಮಹಾಮಠ ಸಮಿತಿಯ ಜೊತೆಗೆ ವ್ಯವಹರಿಸುವಂತಹ ನಿಯಮ ರೂಪಿಸಬೇಕು. ಮೌಖಿಕ ಅಥವಾ ಮಹಾಮಠ ಸಮಿತಿಯನ್ನು ಬೈಪಾಸ್ ಮಾಡಿ ಚಟುವಟಿಕೆಗಳನ್ನು ಸಂಘಟಿಸುವ ಪರಿಪಾಠಗಳು ನಿಲ್ಲಬೇಕು.
5. ಬಂಜಾರ ಸಂಸ್ಕೃತಿ, ಪರಂಪರೆಯ ಸಂರಕ್ಷಣೆ, ತಾಂಡಗಳ ಸಮಗ್ರ ಅಭಿವೃದ್ಧಿ ಮತ್ತು ಬಲವಂತದ ಮತಾಂತರ ತಡೆಗೆ ಭಾಯಾಗಡ್ ಮಹಾಮಠ ಸಮಿತಿ ವಿಶೇಷ ಕಾರ್ಯಕ್ರಮ ರೂಪಿಸಬೇಕು ಕಾರ್ಯನಿರ್ವಹಿಸುವಂತಾಗಬೇಕು.
6. ಭಾಯಾಗಡ್ ಮಹಾಮಠ ಸಮಿತಿ ಮತ್ತು ಪ್ರತಿಷ್ಠಾನವನ್ನು ಬಲಪಡಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಬಂಜಾರ ಸಂಘಟನೆಗಳ ಮುಖಂಡರು, ಸಮಾಜದ ಸ್ವಾಮೀಜಿಯವರು, ಎಲ್ಲಾ ತಾಂಡಗಳ ನಾಯಕ್, ಡಾವೊ, ಕಾರಬಾರಿ, ನಸಾಬಿ, ಹಸಾಬಿ, ಮಹಿಳೆಯರು ಸೇರಿದಂತೆ ಎಲ್ಲಾ ಆಸಕ್ತರಿಗೆ ಮುಕ್ತವಾಗಿ ಸದಸ್ಯತ್ವ ನೀಡಬೇಕು. ಪ್ರಜಾಸತ್ತಾತ್ಮಕವಾಗಿ ಸಮಿತಿಗಳಿಗೆ ಪದಾಧಿಕಾರಿಗಳಿಗಳ ಅಯ್ಕೆ, ಜವಾಬ್ದಾರಿ ನೀಡುವಂತಾಗಬೇಕು.