ಬೆಳಗಾವಿ ನಗರದ ಗಾಲ್ಫ್ ಕ್ಲಬ್ ಬಳಿ ಚಿರತೆ ಪ್ರತ್ಯಕ್ಷ: ನಗರದ ಜನರಲ್ಲಿ ಆತಂಕ

Update: 2022-08-22 14:56 GMT

ಬೆಳಗಾವಿ, ಆ. 22: ‘ನಗರದ ಹಿಂಡಲಗಾ ರಸ್ತೆಯಲ್ಲಿ ಚಿರತೆಯೊಂದು (Leopard) ಕಾಣಿಸಿಕೊಂಡಿದ್ದು, ನಿರ್ಭಯವಾಗಿ ರಸ್ತೆಯ ಪಕ್ಕದಲ್ಲೇ ಓಡಾಡುತ್ತಿರುವುದನ್ನು ಖಾಸಗಿ ಬಸ್ ಪ್ರಯಾಣಿಕರೊಬ್ಬರ ಮೊಬೈಲ್ ವಿಡಿಯೋದಲ್ಲಿ ಸೆರೆ ಹಿಡಿದಿದ್ದು, ಬೆಳಗಾವಿ ನಗರದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಆ.7, 8ರಂದು ನಗರದ ಗಾಲ್ಫ್ ಮೈದಾನದ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಚಿರತೆ ಇದೀಗ ಮತ್ತೆ ಗಾಲ್ಫ್ ಕ್ಲಬ್ ಸಮೀಪದ ಜಾಧವ ನಗರದ ಹುಲ್ಲಿನ ಪೊದೆಯೊಳಗೆ ಕಾಣಿಸಿಕೊಂಡಿದ್ದ ಚಿರತೆ ಪತ್ತೆಗೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಶಸ್ತ್ರಸಹಿತ ನೂರಾರು ಸಿಬ್ಬಂದಿಯೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ ಚಿರತೆ ತಪ್ಪಿಸಿಕೊಳ್ಳುತ್ತಿದೆ. ಚಿರತೆ ಪ್ರತ್ಯೇಕ್ಷವಾಗಿರುವ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಶಾಲೆಗಳಿಗೆ ರಜೆ ನೀಡಲಾಗಿದೆ.

ಮೂರು ದಿನಗಳ ಹಿಂದಷ್ಟೇ ವನಿತಾ ವಿದ್ಯಾಲಯ ಶಾಲೆ ಆವರಣದಲ್ಲಿ ಚಿರತೆ ಕಂಡಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದರು. ಮಕ್ಕಳ ಮಾತನ್ನು ಹಗುರವಾಗಿ ತೆಗೆದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ನೆಪಕ್ಕೆ ಮಾತ್ರ ಪರಿಶೀಲನೆ ನಡೆಸಿದ್ದರು. ಇದೀಗ ಚಿರತೆ ಕಾಣಿಸಿಕೊಂಡ ವಿಡಿಯೊ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ವನ್ಯಮೃಗ ಜನರಿಗೆ ಹಾನಿ ಮಾಡುವ ಸಾಧ್ಯತೆಗಳಿದ್ದು ಕೂಡಲೇ ಚಿರತೆ ಸೆರೆ ಹಿಡಿಯಬೇಕೆಂಬ ಆಗ್ರಹ ಕೇಳಿಬಂದಿದೆ. 

ಗಾಲ್ಫ್ ಮೈದಾನದ ಎಡಬದಿಯಿಂದ ಸದ್ದು ಮಾಡುತ್ತ ಕೆಲವು ಸಿಬ್ಬಂದಿ ಮುನ್ನುಗ್ಗಿದರು. ಮರದ ಹಿಂದೆ ಚಿರತೆ ಅವಿತಿತ್ತು. ಒಂದು ಕಡೆಯಿಂದ ಚಿರತೆ ಓಡಿಸುವುದು, ವಿರುದ್ಧ ದಿಕ್ಕಿನಲ್ಲಿ ಬಲೆ ಹಿಡಿದು ನಿಲ್ಲಲು ಅರಣ್ಯ ಇಲಾಖೆ ಯೋಜನೆ ರೂಪಿಸಿತ್ತು. ಆದರೆ, ಗಾಲ್ಫ್ ಮೈದಾನ ಸೇರಿದ ಚಿರತೆ ಕಣ್ಣೆದುರಲ್ಲೇ ನೆಗೆದು ಪರಾರಿಯಾಯಿತು. ಈ ವೇಳೆ ಸಮೀಪದಲ್ಲೇ ಗನ್ ಹಿಡಿದು ನಿಂತಿದ್ದ ಶೂಟರ್ ಅರಿವಳಿಕೆ ಚುಚ್ಚುಮದ್ದು ಹಾರಿಸಿದರೂ ಅದು ಚಿರತೆಗೆ ತಗುಲಲಿಲ್ಲ. ಹೀಗಾಗಿ ಚಿರತೆ ಸೆರೆ ಕಾರ್ಯಾಚರಣೆ ವಿಫಲವಾಗಿದೆ.

ಕಾರ್ಯಾಚರಣೆಗೆ ಸಕ್ರೆಬೈಲ್ ಆನೆ: ‘ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಿಂದ ನಾಳೆ(ಆ.23)ಎರಡು ಆನೆಗಳನ್ನು ತರಿಸಿ ಚಿರತೆ ಕಾರ್ಯಾಚರಣೆ ನಡೆಸಲಾಗುವುದು. ಎರಡು ಅಥವಾ ಮೂರು ದಿನಗಳಲ್ಲಿ ಚಿರತೆ ಸೆರೆ ಹಿಡಿಯಲಾಗುವುದು' ಎಂದಿರುವ ಅರಣ್ಯ ಸಚಿವ ಉಮೇಶ ಕತ್ತಿ, ‘ಅರಣ್ಯ ಇಲಾಖೆಯ 120 ಹಾಗೂ ಪೊಲೀಸ್ ಇಲಾಖೆಯ 80 ಮಂದಿ ಸೇರಿದಂತೆ 200 ಮಂದಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಶೀಘ್ರದಲ್ಲೆ ಚಿರತೆ ಸೆರೆ ಹಿಡಿಯಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News