ಸಕ್ರಿಯ ರಾಜಕಾರಣದಲ್ಲಿ ಇರುವ ವ್ಯಕ್ತಿಗಳಿಗೆ ದಸರಾ ಉದ್ಘಾಟನೆಗೆ ಅವಕಾಶವಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

Update: 2022-08-22 15:16 GMT
ಫೈಲ್ ಚಿತ್ರ

ಮೈಸೂರು,ಆ.22: ಸಕ್ರಿಯ ರಾಜಕಾರಣದಲ್ಲಿ ಇರುವ ವ್ಯಕ್ತಿಗಳಿಗೆ ದಸರಾ (Mysuru Dasara) ಉದ್ಘಾಟನೆಗೆ ಅವಕಾಶವಿಲ್ಲ, ಆದರೂ ಅಂತಿಮ ತೀರ್ಮಾನ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ನನ್ನ ಬಳಿ ಯಾವುದೇ ಮಾಹಿತಿ ಇಲ್ಲ, ಸದ್ಯ ಸಕ್ರಿಯ ರಾಜಕಾರಣದಲ್ಲಿರುವ ರಾಜಕಾರಣಿಗಳನ್ನು ಉದ್ಘಾಟನೆಗೆ ಕರೆಯುವುದಿಲ್ಲ. ಜೊತೆಗೆ ಅನ್ಯ ಭಾಷೆಯ ನಟರನ್ನು ಉದ್ಘಾಟನೆಗೆ ಆಹ್ವಾನಿಸುವ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಅಂತಿಮ ತೀರ್ಮಾನ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದು ಸಚಿವರು ತಿಳಿಸಿದರು.

ಮಡಿಕೇರಿ ಚಲೋ ಚಳವಳಿಯನ್ನು ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಹಾಗೂ ಎಸ್. ಎಂ ಕೃಷ್ಣ ಮಧ್ಯಸ್ಥಿಕೆ ವಹಿಸಿ ಚಳವಳಿಯನ್ನು ನಿಲ್ಲಿಸಬೇಕು ಎಂಬ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಸಲಹೆಯನ್ನು ಸ್ವಾಗತ ಮಾಡುತ್ತೇನೆ ಎಂದು ಸಚಿವ ಸೋಮಶೇಖರ್ ಹೇಳಿದರು.

ನಾಳೆ ಮೈಸೂರಿನಿಂದ ಸಾವರ್ಕರ್ ರಥ ಯಾತ್ರೆಯನ್ನು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದು, ಅದು ಪಕ್ಷದ ಕಾರ್ಯಕ್ರಮ. ಅದರಲ್ಲಿ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News