ಮೀಸಲಾತಿ ನೀಡಿದರೆ ಬೊಮ್ಮಾಯಿ ಫೊಟೋಗೆ ಹಾಲಿನ ಅಭಿಷೇಕ, ಇಲ್ಲದಿದ್ದಲ್ಲಿ ಮನೆ ಮುಂದೆ ಸತ್ಯಾಗ್ರಹ: ಜಯಮೃತ್ಯುಂಜಯ ಶ್ರೀ
ಶಿವಮೊಗ: 'ಲಿಂಗಾಯತ ಪಂಚಮಸಾಲಿ, ಮಲೆಗೌಡ ಲಿಂಗಾಯತ ಸಮಾಜವನ್ನು ಪ್ರವರ್ಗ "2ಎ" ಮೀಸಲಾತಿಗೆ ಸೇರಿಸಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಆ.22ಕ್ಕೆ ಮುಕ್ತಾಯವಾಗಲಿದ್ದು, ಸೋಮವಾರ ಮಧ್ಯರಾತ್ರಿ ಒಳಗಾಗಿ ಮೀಸಲಾತಿ ಘೋಷಿಸದಿದ್ದರೆ ಆ.25 ರಂದು ಬೆಳಿಗ್ಗೆ 10ಗಂಟೆಗೆ ಶಿವಮೊಗ್ಗದಲ್ಲಿ ಶಿವಪ್ಪನಾಯಕ ಪ್ರತಿಮೆ ಬಳಿ ಬಹಿರಂಗ ಸಭೆ ನಡೆಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೂಲಕ ಸರ್ಕಾರಕ್ಕೆ ಜ್ಞಾಪಕಪತ್ರ ಸಲ್ಲಿಸಲಾಗುವುದು. ಯಡಿಯೂರಪ್ಪ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸದಿದ್ದಲ್ಲಿ ಅವರ ಶಿವಮೊಗ್ಗದಲ್ಲಿರುವ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು' ಎಂದು ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಸಮಾಜ ಕೂಡಲಸಂಗಮ ಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ (Jayamruthyunjaya Swami) ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಿಂದ ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ರಾಜ್ಯಾದ್ಯಂತ ನಿರಂತರವಾಗಿ ಲಿಂಗಾಯಿತ ಪಂಚಮಸಾಲಿ, ಮಲೆಗೌಡ ಲಿಂಗಾಯತ ಸಮುದಾಯವನ್ನು ರಾಜ್ಯ ಸರ್ಕಾರದ 2 ಎ ಮೀಸಲಾತಿಗೆ ಒಳಪಡಿಸ ಬೇಕು. ಹಾಗೂ ಎಲ್ಲಾ ಲಿಂಗಾಯತ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇ ಕೆಂದು ಹಕ್ಕೊತ್ತಾಯ ದಿಂದ ಮೀಸಲಾತಿ ಚಳವಳಿ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.
ಈಗಾಗಲೇ 10 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ನಿರಂತರ ಪಾದಯಾತ್ರೆ ಮೂಲಕ ಹಕ್ಕೊತ್ತಾಯ ಮಾಡುವುದು, ರಾಜ್ಯದಾದ್ಯಂತ ಹರಿದು ಹಂಚಿ ಹೋಗಿರುವ ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸುವುದು, ಇದರೆಲ್ಲದರ ನಡುವೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಹೋರಾಟ ನಡೆಸಲಾಗುತ್ತಿದೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸೆಪ್ಟೆಂಬರ್ 21, 2021 ರಲ್ಲಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಅವರು ಅಧಿಕಾರ ತ್ಯಾಗ ಮಾಡಿದ ಮೇಲೆ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ 3 ಬಾರಿ ಭರವಸೆ ನೀಡಿ ವಿಫಲವಾಗಿದೆ. ಕೊನೆಗೆ ಅನಿವಾರ್ಯವಾಗಿ ಮುಖ್ಯಮಂತ್ರಿಗಳ ಮನೆ ಮುಂಭಾಗ ಧರಣಿ ಕೂರುವ ತೀರ್ಮಾನ ಮಾಡಿದಾಗ ಸಂಧಾನ ಸಭೆ ನಡೆಸಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದಲ್ಲದೇ, ಆಯೋಗ ರಚಿಸಿ ಸಮೀಕ್ಷೆಗೆ ತೀರ್ಮಾನ ಮಾಡಲಾಗಿತ್ತು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದರು.
ಸಮೀಕ್ಷೆಯ ವರದಿ ಬರುವ ಮುನ್ನ ಸರ್ಕಾರಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ಜಾಗೃತಿ ಸಭೆಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಬಹಿರಂಗ ಸಭೆ ನಡೆಸಲಾಗಿದೆ. ಆ.25ರಂದು ಶಿವಮೊಗ್ಗದಲ್ಲಿ ರ್ಯಾಲಿ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.
ಸರ್ಕಾರ ಕೊಟ್ಟ ಮಾತಿನಂತೆ ಮೀಸಲಾತಿ ಘೋಷಿಸಿದ್ದರೆ ಆ.23ರ ಬೆಳಿಗ್ಗೆ 10ಗಂಟೆಗೆ ಶಿಗ್ಗಾಂವಿಯ ಚೆನ್ನಮ್ಮ ವೃತ್ತದಲ್ಲಿ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಮೀಸಲಾತಿ ಘೋಷಿಸಿದರೆ ಮುಖ್ಯಮಂತ್ರಿ ಬೊಮ್ಮಯಿ ಅವರ ಭಾವಚಿತ್ರದ ಕಟೌಟ್‌ಗೆ 100 ಲೀಟರ್ ಹಾಲಿನ ಅಭಿಷೇಕ ಮಾಡಿ ಅಭಿನಂದಿಸಲಾಗುವುದು ಎಂದರು.
ಅಭಿಯಾನದ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, 2 ವರ್ಷದಿಂದ ಗುರುಗಳ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಿದ್ದಾಗ 2ಎ ಮೀಸಲಾತಿ ನೀಡುವ ಸಂಪೂರ್ಣ ಭರವಸೆ ನೀಡಿದ್ದರು. 6 ತಿಂಗಳ ಅವಧಿಯನ್ನು ಕೇಳಿದ್ದರು. ಆದರೆ, ಇದುವರೆಗೂ ನಮ್ಮ ಹೋರಾಟಕ್ಕೆ ಫಲ ಸಿಗಲಿಲ್ಲ. ಬಿ.ಎಸ್.ವೈ. ಮನಸ್ಸು ಮಾಡಿದರೆ ಅದು ಖಂಡಿತವಾಗಿ ನೆರವೇರುತ್ತದೆ ಎಂದರು.
ನಮ್ಮ ಸಮಾಜ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದೆ. ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲೂ ಅತ್ಯಂತ ಕೆಳಮಟ್ಟದಲ್ಲಿದ್ದು, ಎಲ್ಲಾ ವಿಚಾರಗಳ ಮಾಹಿತಿಯೂ ಸರ್ಕಾರಕ್ಕಿದೆ. ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದ್ದು, ಅವರು ಕೂಡ ಹೋರಾಟ ನಡೆಯುವ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಕೂಡ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಶಿಗ್ಗಾಂವಿಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮೂಲಕ ಮತ್ತೊಮ್ಮೆ ಒತ್ತಡ ಹೇರಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಪೊ.ವಿಜಯಕುಮಾರ್, ರುದ್ರೇಗೌಡ ಕಡೆಮನೆ, ಎಂ.ಎಸ್.ಕುಮಾರ್, ಎಂ.ಪಿ.ವಿಜ???ಕುಮಾರ್, ನವೀನ್ ಉಪಸ್ಥಿತರಿದ್ದರು.