ನಕಲಿ ಜಾತಿ ಪ್ರಮಾಣ ಪತ್ರ ರದ್ದು ಮಾಡಲು ಬಿಎಸ್ಪಿ ಆಗ್ರಹ

Update: 2022-08-22 17:20 GMT

ಬೆಂಗಳೂರು, ಆ. 22: ‘ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಂವಿಧಾನ ಹಾಗೂ ನ್ಯಾಯಾಲಯಗಳ ಬಗ್ಗೆ ಗೌರವವು ಇರುವುದು ನಿಜವೇ ಆಗಿದ್ದಲ್ಲಿ, ಆದಷ್ಟು ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಬಲಾಢ್ಯರು ಪಡೆದಿರುವ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಕೂಡಲೇ ರದ್ದು ಮಾಡಿ, ತಪ್ಪಿತಸ್ಥರನ್ನು ಸರಕಾರ ಸೇವೆಯಿಂದ ವಜಾ ಮಾಡಬೇಕು' ಎಂದು ಬಿಎಸ್ಪಿ (BSP) ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಗುರುಮೂರ್ತಿ ಆಗ್ರಹಿಸಿದ್ದಾರೆ.

ಸೋಮವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ‘ಸರಕಾರದ ವತಿಯಿಂದ ಅವರುಗಳು ಪಡೆದಿರುವ ಸಂಬಳ-ಸವಲತ್ತುಗಳನ್ನು ಹಿಂಪಡೆಯಬೇಕು ಮತ್ತು ಸೆರೆವಾಸ ಶಿಕ್ಷೆ ವಿಧಿಸಬೇಕು. ನಕಲಿ ಜಾತಿ ದೃಢೀಕರಣ ಪತ್ರ ತೋರಿಸಿ ಶಾಸಕ/ಸಂಸದರಾದವರಿಗೆ ಗರಿಷ್ಠ ದಂಡ ಮತ್ತು ಸೆರೆವಾಸದ ಶಿಕ್ಷೆ ವಿಧಿಸಬೇಕು. ಸುಳ್ಳು ಜಾತಿಪತ್ರಗಳನ್ನು ನೀಡಿರುವ ಮತ್ತು ಅವನ್ನು ಮಾನ್ಯ ಮಾಡಿರುವ ಎಲ್ಲ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಬೇಕು' ಎಂದು ಒತ್ತಾಯಿಸಿದ್ದಾರೆ.

‘ರಾಜ್ಯ ಸರಕಾರವು ಒಂದು ವಿಶೇಷ ಜಾಗೃತಿ ಅಭಿಯಾನವನ್ನು ಆರಂಭಿಸಿ, ಅಪರಾಧಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಮತ್ತು ನಿಜವಾದ ಎಸ್ಸಿ-ಎಸ್ಟಿ ವರ್ಗಗಳಿಗೆ ನ್ಯಾಯ ಒದಗಿಸಬೇಕು. ಸರಕಾರವು ತನ್ನ ಸಂವಿಧಾನಿಕ ಕರ್ತವ್ಯವನ್ನು ಪಾಲಿಸುವುದರಲ್ಲಿ ವಿಳಂಬ ನೀತಿ ಅನುಸರಿಸಿದರೆ, ಬಿಎಸ್ಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ' ಎಂದು ಗುರುಮೂರ್ತಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News