ಆಝಾನ್ ವಿಚಾರಗಳಿಗೆ ನಿರ್ಬಂಧ ಕೋರಿ ಸಲ್ಲಿಸಿದ್ದ ಅರ್ಜಿ ಆಲಿಸಲು ಹೈಕೋರ್ಟ್ ನಕಾರ

Update: 2022-08-22 18:13 GMT

ಬೆಂಗಳೂರು, ಆ.22: ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಕೂಗಲಾಗುವ ಆಝಾನ್‌ನಲ್ಲಿ ಇರುವ ವಿಚಾರಗಳನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಹೈಕೋರ್ಟ್ (High Court of Karnataka) ನಿರಾಕರಿಸಿದೆ.

ನಗರದ ನಿವಾಸಿ ಆರ್.ಚಂದ್ರಶೇಖರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಪ್ರತಿ ದಿನ 5 ಬಾರಿ ಆಝಾನ್ ಕೂಗುವುದರಿಂದ ಬೇರೆ ಧರ್ಮಗಳ ಅನುಯಾಯಿಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಅರ್ಜಿದಾರರೇ ಆಝಾನ್ ಅಗತ್ಯ ಧಾರ್ಮಿಕ ಆಚರಣೆ ಎಂದು ತಿಳಿಸಿದ್ದಾರೆ. ಅಲ್ಲದೆ, ಆಝಾನ್‌ನಲ್ಲಿ ಇರುವ ವಿಚಾರಗಳು, ಬೇರೆ ಧರ್ಮಗಳ ಅನುಯಾಯಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವ ಅರ್ಜಿದಾರರ ವಾದವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಭಾರತದ ಸಂವಿಧಾನದ ಪ್ರಕಾರ 25 ಮತ್ತು 26ನೆ ವಿಧಿಗಳು ನಮ್ಮ ದೇಶದ ಸಂಸ್ಕೃತಿಯ ಸಹನಶೀಲತೆಯ ಮೂರ್ತರೂಪವಾಗಿವೆ. 25(1) ವಿಧಿಯು ಪ್ರತಿ ವ್ಯಕ್ತಿಯೂ ತಮ್ಮ ತಮ್ಮ ಧರ್ಮಗಳಲ್ಲಿ ಶ್ರದ್ಧೆ ಇರಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಪೀಠವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News