×
Ad

ವಾರಕ್ಕೆ ಎರಡು ಬಾರಿ ಪಬ್‌ನಲ್ಲಿ ಕಾಲಕಳೆಯುವ ಸಂಸದ ಪ್ರತಾಪ್ ಸಿಂಹ ಬೂಟಾಟಿಕೆ ನಿಲ್ಲಿಸಬೇಕು: ಡಾ.ಪುಷ್ಪಾ ಅಮರ್ ನಾಥ್

Update: 2022-08-23 16:00 IST

ಮೈಸೂರು: ವಾರಕ್ಕೆ ಎರಡು ಬಾರಿ ಪಬ್ ನಲ್ಲಿ ಕಾಲಕಳೆಯುವ ಸಂಸದ ಪ್ರತಾಪ್ ಸಿಂಹ, ದೇವರು, ಧರ್ಮದ ಬಗ್ಗೆ ಮಾತನಾಡುವ ಬೂಟಾಟಿಕೆಯನ್ನು ನಿಲ್ಲಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರಿಗೆ ತಮ್ಮದೇ ಆದ ಆಚಾರ, ವಿಚಾರ ಸಂಸ್ಕೃತಿ ವೈವಿಧ್ಯತೆಗಳು ಇರುತ್ತವೆ. ಮಾಂಸಹಾರಿಗಳು ಸಸ್ಯಹಾರಿಗಳು ತಮ್ಮ ಆಚರಣೆ ಅನುಸಾರ ದೇವರ ಪೂಜೆ ಮಾಡುತ್ತಾರೆ. ಇದನ್ನು ಪ್ರಶ್ನಿಸಲು ಪ್ರತಾಪ್ ಸಿಂಹ ಯಾರು? ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪತ್ನಿ ಬಗ್ಗೆ ಮಾತನಾಡುವ ಯೋಗ್ಯತೆ ಪ್ರತಾಪ್ ಸಿಂಹ  ಅವರಿಗಿಲ್ಲ,  ಸಿದ್ಧರಾಮಯ್ಯ ಅವರು ಅವರ ಪತ್ನಿಯನ್ನು ಗೌರವವಾಗಿ ನಡೆಸಿಕೊಂಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ರೀತಿ ಮದುವೆಯಾಗಿದ್ದರೂ ಹೆಂಡತಿಯನ್ನು ಬಾಳಿಸದೆ ಕಳುಹಿಸಿಲ್ಲ, ಜೊತೆಗೆ ಪ್ರತಾಪ್ ಸಿಂಹ ತನ್ನ ಹೆಂಡತಿಯನ್ನೇ ತಂಗಿ ಎಂದು ಹೇಳಿಕೊಂಡು ಸೈಟ್ ಪಡೆಯಲು ಮುಂದಾಗಿದ್ದಾರೆ ಎಂದು ತಿರುಗೇಟು ನೀಡಿದರು.

ಸಂಸದ ಪ್ರತಾಪ್ ಸಿಂಹನ ರಾಸಲೀಲೆಯ ಸಿಡಿಗಳು ಸಾಕಷ್ಟಿವೆ. ಈತ ಅದನ್ನೆಲ್ಲಿ ಬಹಿರಂಗ ಪಡಿಸುತ್ತಾರೊ ಎಂದು ಕೋಟ್೯ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಕೋಟ್೯ ಸ್ಟೇ ಬಿಡುಗಡೆಯಾದರೆ ಈತನನ್ನು ಜನ ಸಿಡಿ ಪ್ರತಾಪ್ ಸಿಂಹ ಎಂದು ಕರೆಯಲಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಸಿದ್ದರಾಮಯ್ಯ ವ್ಯಕ್ತಿಯಲ್ಲ, ಶಕ್ತ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಪ್ರತಾಪ್ ಸಿಂಹ ಅವರಿಗೆ ಇಲ್ಲ, ಸಿದ್ದರಾಮಯ್ಯ ನೈಸರ್ಗಿಕವಾಗಿ ನಡೆದುಕೊಳ್ಳುವ ಅಪ್ಪಟ ನೈಜ ವ್ಯಕ್ತಿ. ಅವರು ನಡೆದುಕೊಳ್ಳುವ ರೀತಿಯೇ ನೈಜತೆಯಿಂದ ಕೂಡಿದೆ. ಆದರೆ ಸಂಸದ ಪ್ರತಾಪ್ ಸಿಂಹನ ತರಹ ನಾಟಕ ಆಡಲ್ಲ, ಕೃತಕವಾಗಿ ನಡೆದುಕೊಳ್ಳುವುದಿಲ್ಲ, ಕ್ಯಾಮೆರಾ ಕಂಡಾಗ ಒಂದು ಇಲ್ಲದಿದ್ದರೆ ಇನ್ನೊಂದು ರೀತಿ ಬಣ್ಣ ಬದಲಾಯಿಸಲ್ಲ ಎಂದು ಹರಿಹಾಯ್ದರು.

ಪ್ರತಾಪ್ ಸಿಂಹ ಮಾತನಾಡುವುದೇ ಒಂದು ನಡೆದುಕೊಳ್ಳುವುದೇ ಒಂದು. ಈತ ವಾರಕ್ಕೆ ಎರಡು ಬಾರಿ ಪಬ್ ಗೆ ಹೋಗದೇ ಇದ್ದರೆ ಇವರಿಗೆ ಇರಲು ಸಾಧ್ಯವಿಲ್ಲ, ಅಂತಹದರಲ್ಲಿ ಇವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂಬ ಅನಗತ್ಯ ಗೊಂದಲವನ್ನುಂಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News