×
Ad

ಮಡಿಕೇರಿ | ಕಸ್ತೂರಿ ರಂಗನ್ ವರದಿ ವಿರುದ್ಧ ಗಾಳಿಬೀಡು ಗ್ರಾಮಸ್ಥರ ನಿರ್ಣಯ: ಹೋರಾಟದ ಎಚ್ಚರಿಕೆ

Update: 2022-08-23 17:05 IST

ಮಡಿಕೇರಿ ಆ.22 : ಡಾ.ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿರುವ ಗಾಳಿಬೀಡು ಗ್ರಾಮಸ್ಥರು, ಪಶ್ಚಿಮಘಟ್ಟದ ಜನರಿಗೆ ನ್ಯಾಯ ದೊರೆಯದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.  

ಗಾಳಿಬೀಡು ಸ್ನೇಹಿತರ ಯುವಕ ಸಂಘದ ವತಿಯಿಂದ ಗ್ರಾಮದ ಅಡ್ಕದಬಾಣೆಯ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಗ್ರಾಮಸ್ಥರೆಲ್ಲರು ಒಗ್ಗೂಡಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. 

ಸಂಘದ ಸದಸ್ಯ ಹಾಗೂ ವಕೀಲ ಕೊಂಬಾರನ ರೋಶನ್ ಗಣಪತಿ ಮಾತನಾಡಿ, ಕಸ್ತೂರಿ ರಂಗನ್ ವರದಿಯ ಸಾಧಕ ಬಾದಕಗಳನ್ನು ವಿವರಿಸಿದರು. 

ಈ ವರದಿ ಜಾರಿಯಿಂದ ಪಶ್ಚಿಮಘಟ್ಟ ವ್ಯಾಪ್ತಿಯ ಮಂದಿ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಜನ ಜಾಗೃತರಾಗಬೇಕಾಗುತ್ತದೆ, ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾಲಘಟದಲ್ಲಿದ್ದರೂ ಗ್ರಾಮೀಣರು  ಸ್ವಾತಂತ್ರ್ಯ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜನರ ಕಣ್ಣೊರೆಸುವ ತಂತ್ರವಾಗಿ ನಿಯೋಗ ರಚಿಸಲಾಗಿದ್ದು, ಕೇಂದ್ರದ ಬಳಿ ತೆರಳುವ ಬಗ್ಗೆ ಮಂಕು ಬೂದಿ ಎರಚಲಾಗುತ್ತಿದೆ ಎಂದು ಆರೋಪಿಸಿದರು.

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಹೇರಲಾಗಿರುವ ಕಾನೂನುಗಳನ್ನು ಸಡಿಲಗೊಳಿಸಿ ಸೂಕ್ಷ್ಮ ಪರಿಸರ ತಾಣದ ಘೋಷಣೆಯನ್ನು ಹಿಂಪಡೆಯದಿದ್ದಲ್ಲಿ ಮುಂದಿನ ಸ್ವಾತಂತ್ರ್ಯವನ್ನು ಆಚರಿಸಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಹೇಳಿದರು.

ಗ್ರಾಮಸ್ಥರೆಲ್ಲರು ಒಕ್ಕೊರಲಿನಿಂದ ಈ ವರದಿಯನ್ನು ವಿರೋಧಿಸುವಂತೆ ಕರೆ ನೀಡಿದರು. ಕಸ್ತೂರಿ ರಂಗನ್ ವರದಿ ವಿರೋಧಿ ಸಮಿತಿಯೊಂದನ್ನು ಗ್ರಾಮ ಮಟ್ಟದಲ್ಲಿ ರಚಿಸಲಾಗುವುದು. ಆ ಮೂಲಕ ಪರಿಶ್ಚಿಮ ಘಟ್ಟದ ಎಲ್ಲಾ ಗ್ರಾಮಗಳಿಗೆ ತೆರಳಿ ಜನರಿಗೆ ಮಾಹಿತಿ ನೀಡಲಾಗುವುದು ಎಂದು ರೋಶನ್ ಗಣಪತಿ ತಿಳಿಸಿದರು.  

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸಾಹಿತಿ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ನಿರ್ದೇಶಕ ನಾಗೇಶ್ ಕಾಲೂರು ಸ್ವಾತಂತ್ರ್ಯ ಹೋರಾಟ ಮತ್ತು ಪ್ರಸ್ತುತ ವಿದ್ಯಾಮಾನದ ಕುರಿತು ಬೆಳಕು ಚೆಲ್ಲಿದರು.

ಸ್ವಾತಂತ್ರ್ಯ ತ್ಯಾಗ ಬಲಿದಾನದ ಪ್ರತೀಕ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯವಾಗಬೇಕು. ಪ್ರಸ್ತುತ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ನಾಡಿನ ಜನ ಚಿಂತನೆ ನಡೆಸಬೇಕು ಎಂದರು.

ಗಾಳಿಬೀಡು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಸರಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು. ಸ್ನೇಹಿತರ ಯುವಕ ಸಂಘದ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. 

ಗ್ರಾ.ಪಂ ಉಪಾಧ್ಯಕ್ಷ ಉಡುದೋಳಿರ ಎಸ್.ಗಿರೀಶ್ ಮಾತನಾಡಿ, ಗ್ರಾಮದ ಜ್ವಲಂತ ಸಮಸ್ಯೆಗಳನ್ನು ಬಗೆ ಹರಿಸಲು ಎಲ್ಲರು ಶ್ರಮಿಸೋಣ ಎಂದರು.

ಗಾಳಿಬೀಡು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಉಷಾ ಮಾತನಾಡಿ, ಆರೋಗ್ಯ ಇಲಾಖೆಯ ಸೌಲಭ್ಯಗಳನ್ನು ಗ್ರಾಮಸ್ಥರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಸ್ನೇಹಿತರ ಯುವಕರ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಆರ್.ಅನಂತಕುಮಾರ್ ಮಾತನಾಡಿ, ಸಂಘ ಸಂಸ್ಥೆಗಳ ಅಗತ್ಯತೆ ಮತ್ತು ತಳಮಟ್ಟದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಯುವಕರಿಗೆ ಕಿವಿಮಾತು ಹೇಳಿದರು.  

ಗಾಳಿಬೀಡು ದವಸ ಭಂಡಾರದ ಉಪಾಧ್ಯಕ್ಷೆ ಕೋಳುಮುಡಿಯನ ಧರ್ಮಾವತಿ ಮಾತನಾಡಿ, ಗ್ರಾಮಗಳಲ್ಲಿ ಯುವಕ ಸಂಘಗಳು ಹೆಚ್ಚು ಚಟುವಟಿಕೆಯಿಂದ ಕಾರ್ಯ ನಿರ್ವಹಿಸಬೇಕು. ಸ್ನೇಹಿತರ ಯುವಕ ಸಂಘಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.  

ಸ್ನೇಹಿತರ ಯುವಕ ಸಂಘದ ಅಧ್ಯಕ್ಷ ಕೋಳುಮುಡಿಯನ ಎ.ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಳಿಬೀಡು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ರಮ್ಯ, ಅರಣ್ಯ ಸಮಿತಿ ಅಧ್ಯಕ್ಷ ಕೆ.ಪಿ.ಗಣಪತಿ, ತ್ರೀವೇಣಿ ಸ್ವ-ಸಹಾಯ ಸಂಘ, ಶ್ರೀನಿಧಿ ಸ್ವ-ಸಹಾಯ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೊಂಬಾರನ ರೋಶನ್ ಗಣಪತಿ ನಿರೂಪಿಸಿ, ವರೀಷ್ಮ ಪ್ರಾರ್ಥಿಸಿದರು. 

ಸಭಾ ಕಾರ್ಯಕ್ರಮಕ್ಕೂ ಮೊದಲು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ವಾಹನ ಜಾಥ ನಡೆಯಿತು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಧ್ವಜಾರೋಹಣ ನೆರವೇರಿಸಿದರು. ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News