PSI ನೇಮಕಾತಿ ಹಗರಣ: ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಕೆ

Update: 2022-08-23 13:11 GMT

ಬೆಂಗಳೂರು, ಆ.23: ಪಿಎಸ್ಸೈ (PSI)  ನೇಮಕ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಆರೋಪಿಗಳ ವಿರುದ್ಧ ನಗರದ ಎಸಿಎಂಎಂ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ. 

545 ಪಿಎಸ್ಸೈ ಅಕ್ರಮ ಪರೀಕ್ಷಾ ಒಳಸಂಚಿನ ಹಣದ ವರ್ಗಾವಣೆ, ಸಂಗ್ರಹಕುರಿತು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಕೃತ್ಯದಲ್ಲಿ ಭಾಗಿಯಾಗಿರುವ ನೇಮಕಾತಿ ವಿಭಾಗದ ಸಿಬ್ಬಂದಿಗಳ ಕರ್ತವ್ಯ ಹಂಚಿಕೆ ಮಾಡಿದ್ದಾರೆ. ಅದರಂತೆ ಡಿವೈಎಸ್‍ಪಿ ಶಾಂತಕುಮಾರ್, ಶೀನಿವಾಸ್, ಶ್ರೀಧರ್, ಎಫ್‍ಡಿಎ ಹರ್ಷಾಗೆ ಮೌಖಿಕವಾಗಿ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. 

ಆ ಮೂಲಕ ಅಪರಾಧಿಕ ಒಳ ಸಂಚುರೂಪಿಸಿ ಅನರ್ಹ ಅಭ್ಯರ್ಥಿಗಳನ್ನು ಅರ್ಹರನ್ನಾಗಿಸಿ ನೇಮಿಸಲು ಯತ್ನಿಸಲಾಗಿದೆ. ಹಣದಾಸೆಗೆ ಅಕ್ರಮ ಕೂಟ ರಚಿಸಿಕೊಂಡು ಕುಕೃತ್ಯ ಎಸಗಿರುವ ಆರೋಪಿಗಳು, ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ, ಉಳಿದಂತೆ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಡುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.

ಪಿಎಸ್ಸೈ ಅಕ್ರಮ ನೇಮಕಾತಿ ಹಣ ಸಂಗ್ರಹದ ಹೊಣೆಯನ್ನು ಡಿವೈಎಸ್‍ಪಿ ಶಾಂತಕುಮಾರ್ ಅವರು ಹೊತ್ತುಕೊಂಡಿದ್ದರು. ಇವರು ನೇಮಕಾತಿ ವಿಭಾಗದಲ್ಲಿ 12 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ. 545 ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ 5 ಕೋಟಿ ಹಣ ನೀಡಿ ಉಳಿದ ಹಣವನ್ನು ಹಂಚಿಕೊಳ್ಳಲು ಸೂಚಿಸಿದ್ದಾಗಿ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. 

ಸ್ವಇಚ್ಛಾ ಹೇಳಿಕೆ: ಅಭ್ಯರ್ಥಿಗಳು ಮತ್ತು ಮಧ್ಯವರ್ತಿಗಳಿಂದ ಸಂಗ್ರಹಿಸಿದ್ದ ಹಣವನ್ನು 2021ರ ಅ.1 ರಂದು ಎಫ್‍ಡಿಎ ಹರ್ಷ ಅವರಿಂದ ಡಿವೈಎಸ್‍ಪಿ ಶಾಂತಕುಮಾರ್ ಗೆ ವರ್ಗಾವಣೆ ಮಾಡಲಾಗಿದೆ. 

ಹಡ್ಸನ್ ಸರ್ಕಲ್‍ನ ಕೃಷಿ ಭವನ ಬಳಿ 1 ಕೋಟಿ 35 ಲಕ್ಷ ನೀಡಿದ್ದಾಗಿ ಸ್ವಇಚ್ಛಾ ಹೇಳಿಕೆಯನ್ನು ಕೂಡ ದಾಖಲಿಸಲಾಗಿದೆ. ಅದೇ ದಿನ ಎಡಿಜಿಪಿ ಅಮೃತ್ ಪೌಲ್‍ಗೂ ಹಣ ವರ್ಗಾವಣೆಯಾಗಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News