VIDEO- ನಾನು ಅಂದು ಮಾಂಸಹಾರ ಸೇವಿಸಿರಲಿಲ್ಲ, ಮೊಟ್ಟೆ ಎಸೆದಿದ್ದ ಸಂಪತ್ ಕಾಂಗ್ರೆಸ್ ಕಾರ್ಯಕರ್ತನೇ ಅಲ್ಲ: ಸಿದ್ದರಾಮಯ್ಯ

Update: 2022-08-23 15:08 GMT

ಬೆಂಗಳೂರು, ಆ.23: ಸಾವರ್ಕರ್ ಬಗ್ಗೆ ನಾನು ಮಾತನಾಡಿದ್ದಕ್ಕೆ ಪ್ರತಿಭಟನೆ ಮಾಡುವುದಾದರೆ ಈ ಹಿಂದೆ ನಾನು ಕೊಡಗಿಗೆ ಹೋಗಿದ್ದಾಗ ಯಾಕೆ ಪ್ರತಿಭಟನೆ ಮಾಡಿರಲಿಲ್ಲ. ದಾವಣಗೆರೆಯಲ್ಲಿ ನನ್ನ ಜನ್ಮದಿನ ಕಾರ್ಯಕ್ರಮದ ಬಳಿಕ ಬಿಜೆಪಿ ಸರಕಾರ ಹಾಗೂ ಆರೆಸೆಸ್ಸ್‍ಗೆ ಹೊಟ್ಟೆ ಉರಿ ಶುರುವಾಗಿದೆ. ನನ್ನ ವರ್ಚಸ್ಸನ್ನು ಕುಗ್ಗಿಸಲು, ನನ್ನ ವಿರುದ್ಧ ಅಪಪ್ರಚಾರಗಳನ್ನು ಮಾಡಲು ಹೊರಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ನಾವು ಆ.26ರಂದು ಹಮ್ಮಿಕೊಂಡಿದ್ದ ಪ್ರತಿಭಟನೆ ಕೊಡಗಿನ ಜನರ ವಿರುದ್ಧ ಅಲ್ಲ, ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯ ವಿರುದ್ಧ. ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಉದ್ದೇಶಿತ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದರು.

ಇದನ್ನೂ ಓದಿ :ನಿಷೇಧಾಜ್ಞೆ ಪಾಲಿಸ್ತೀವಿ, ಆಗಸ್ಟ್‌ 26ಕ್ಕೆ 'ಕೊಡಗು ಚಲೋ' ಇಲ್ಲ: ಸಿದ್ದರಾಮಯ್ಯ

ನಾವು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮಾಡಬಹುದಿತ್ತು. ಆದರೆ, ನಾನು ಒಬ್ಬ ಮಾಜಿ ಮುಖ್ಯಮಂತ್ರಿಯಾಗೂ ಕಾನೂನನ್ನು ಉಲ್ಲಂಘಿಸುವುದು ಸರಿಯಲ್ಲ. ಇದು ಪಕ್ಷದ ಕಾರ್ಯಕ್ರಮ ಆಗಿರುವುದರಿಂದ, ಮುಖಂಡರೊಂದಿಗೆ ಚರ್ಚಿಸಿ, ಪ್ರತಿಭಟನೆ ಮುಂದೂಡುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಮಡಿಕೇರಿಯಲ್ಲಿ ಕಲ್ಲನ್ನು ಬಟ್ಟೆಯಲ್ಲಿ ಸುತ್ತಿಕೊಂಡು ನನ್ನ ಕಾರಿಗೆ ಹೊಡೆದಿದ್ದಾರೆ. ಎರಡು ಕಡೆ ಮೊಟ್ಟೆ ಎಸೆದಿದ್ದಾರೆ. ಅಲ್ಲದೆ, ಕುಶಾಲನಗರ, ಶನಿವಾರ ಸಂತೆಯಲ್ಲೂ ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ಎಸ್ಪಿ ಗಮನಕ್ಕೆ ತಂದರೂ ಏನು ಪ್ರಯೋಜನವಾಗಲಿಲ್ಲ. ಎಸ್ಪಿಯಾಗಲಿ, ಡಿಸಿಯಾಗಲಿ ಯಾವುದೆ ಕ್ರಮ ಕೈಗೊಂಡಿಲ್ಲ. ಇದೊಂದು ಸರಕಾರಿ ಪ್ರಾಯೋಜಿತ ದಾಳಿಯಾಗಿದೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಆಹಾರ ಪದ್ಧತಿ ಅವರವರ ವೈಯಕ್ತಿಕ ವಿಚಾರ. ನಾನು ಮಾಂಸಾಹಾರ ಸೇವಿಸುತ್ತೇನೆ ಅದು ನನ್ನ ಅಭ್ಯಾಸ. ನೀವು ಸೇವಿಸುವುದಿಲ್ಲವೆ ಅದು ನಿಮ್ಮ ಅಭ್ಯಾಸ. ಮಡಿಕೇರಿಗೆ ಹೋದಾಗ ಅಂದು ವೀಣಾ ಅಚ್ಚಯ್ಯ ಅವರ ಮನೆಯಲ್ಲಿ ಮಾಂಸಾಹಾರ ಸೇವಿಸುವಂತೆ ಕೇಳಿದರು. ಆದರೆ, ನಾನು ಅಂದು ಮಾಂಸಾಹಾರ ಸೇವಿಸಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸಂಪತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ:  ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೇ ಅಲ್ಲ. ಆತ RSS ಕಾರ್ಯಕರ್ತ, ಕೇಸರಿ ಶಾಲು ಹೊದ್ದುಕೊಂಡಿದ್ದಾನೆ. ಬಿಜೆಪಿಯವ್ರೇ ಆತನನ್ನು ಬಿಡಿಸಿದ್ದಾರೆ ಎಂದರು.

ಕೊಡಗಿನಲ್ಲಿ ಅತಿವೃಷ್ಟಿಯಿಂದಾಗಿ ಅನೇಕ ಕಡೆಗಳಲ್ಲಿ ಭೂಮಿ ಕುಸಿದಿರುವುದರಿಂದ, ಜನ ತಮ್ಮ ಮನೆಗಳನ್ನು ತೊರೆದು ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ರಸ್ತೆಗಳು ಮುಚ್ಚಿ ಹೋಗಿರುವುದರಿಂದ ಸಾರಿಗೆ ವ್ಯವಸ್ಥೆ ಇಲ್ಲದಂತಾಗಿದೆ. ಜನರ ಕಷ್ಟಗಳನ್ನು ವಿಚಾರಿಸಲು ಹೋದಾಗ ನನಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಯಾರೊಬ್ಬ ನನ್ನ ಕಾರಿನೊಳಗೆ ಕರಪತ್ರ ಎಸೆದು ಹೋದ. ಆದರೂ, ಪೊಲೀಸರು ಅವರನ್ನ ತಡೆಯುವುದಾಗಲಿ, ಬಂಧಿಸುವುದಾಗಲಿ ಮಾಡದೆ, ನಿಷ್ಕ್ರಿಯವಾಗಿ ನಿಂತಿದ್ದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರಕಾರವು ಅಲ್ಲಿನ ಜನರಿಗೆ ಸೂಕ್ತ ಪರಿಹಾರವನ್ನು ಕಲ್ಪಿಸಿಕೊಟ್ಟಿಲ್ಲ. ನಮ್ಮ ಸರಕಾರದ ಅವಧಿಯಲ್ಲಿ ನೆರೆ ಸಂತ್ರಸ್ತರಿಗೆ ಕಟ್ಟಿಕೊಟ್ಟಿದ್ದ 750 ಮನೆಗಳು ಹೊರತುಪಡಿಸಿದರೆ, ಈ ಸರಕಾರ ಹೊಸದಾಗಿ ಒಂದು ಮನೆಯನ್ನೂ ಕಟ್ಟಿಸಿಕೊಟ್ಟಿಲ್ಲ. ಸಂತ್ರಸ್ತರಿಗೆ ನೀಡಿರುವ 10 ಸಾವಿರ ರೂ.ಗಳ ಚೆಕ್ ಪಾಸ್ ಆಗದೆ ಜನ ಹೈರಾಣಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮಡಿಕೇರಿಯಲ್ಲಿ 7.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧಕ್ಕೆ ತಡೆಗೋಡೆ ಕಟ್ಟಿದ್ದಾರೆ. ಅದು ಇನ್ನೇನು ಬೀಳುವ ಹಂತದಲ್ಲಿದೆ. ನಮ್ಮ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಆ ತಡೆಗೋಡೆ ವೀಕ್ಷಿಸಲು ಹೋದಾಗ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಮೊಟ್ಟೆ ಎಸೆದು, ಪ್ರತಿಭಟನೆ ಮಾಡಲಾಗಿದೆ. ಇದನ್ನು ಖಂಡಿಸಿ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ ಅವರ ಮೇಲೆ ಲಾಠಿಚಾರ್ಜ್ ನಡೆಸಿರುವ ಪೊಲೀಸರು, ಬಿಜೆಪಿ, ಆರೆಸೆಸ್ಸ್, ಬಜರಂಗದಳದವರ ವಿರುದ್ಧ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಅವರು ಕಿಡಿಗಾರಿದರು.

ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ನನಗೆ ಕೊಡಗಿಗೆ ಬರಲಿ ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದ್ದಾರೆ. ನಾವು ಸ್ವತಂತ್ರ ಭಾರತದಲ್ಲಿ ಇದ್ದೀವಾ ಅಥವಾ ಇಲ್ಲವೋ? ವಿರೋಧ ಪಕ್ಷದ ನಾಯಕನಿಗೆ ಈ ರೀತಿ ಆಡಳಿತ ಪಕ್ಷದ ಶಾಸಕ ಸವಾಲು ಹಾಕುತ್ತಾರೆ ಎಂದರೆ ಏನು ಹೇಳೋದು. ಈ ಹಿಂದೆ ಇದೇ ರೀತಿ ರೆಡ್ಡಿ ಸಹೋದರರು ವಿಧಾನಸಭೆಯಲ್ಲಿ ಸವಾಲು ಹಾಕಿದ್ದಕ್ಕೆ ಅವರ ಅಕ್ರಮ ಗಣಿಗಾರಿಕೆ, ಸರ್ವಾಧಿಕಾರಿ ಧೋರಣೆ ವಿರುದ್ಧ ನಾನು ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು. 

''ಅನ್ಯಾಯದ ವಿರುದ್ಧ ಹೋರಾಟ ಮುಂದುವರೆಯಲಿದೆ''

ಕಾನೂನು ಕಟ್ಟಳೆಗಳನ್ನು ಕಾಂಗ್ರೆಸ್ ಪಕ್ಷ ಸದಾ ಗೌರವಿಸುತ್ತದೆ. ಕೊಡಗಿನಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಮುಂದೂಡಲಾಗಿದೆ. ಆದರೆ, ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News