ನಿಷೇಧಾಜ್ಞೆ ತೆರವಾದ ಬಳಿಕ ‘ಕೊಡಗು ಚಲೋ’: ಹೆಚ್.ಸಿ.ಮಹದೇವಪ್ಪ

Update: 2022-08-23 15:14 GMT

ಮಡಿಕೇರಿ ಆ.23 : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆ.26 ರಂದು ನಡೆಸಲುದ್ದೇಶಿಸಿದ್ದ ‘ಕೊಡಗು ಚಲೋ’ (KODAGU) ಪ್ರತಿಭಟನೆಯನ್ನು ಜಿಲ್ಲಾಡಳಿತ ವಿಧಿಸಿರುವ ನಿಷೇಧಾಜ್ಞೆ ಹಿನ್ನೆಲೆ ಕಾನೂನನ್ನು ಗೌರವಿಸಿ ಹಿಂತೆಗೆದುಕೊಳ್ಳಲಾಗಿದೆ. ಆದರೆ ನಿಷೇಧಾಜ್ಞೆ ತೆರವಾದ ಬಳಿಕ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಎನ್ನುವುದು ಸಾಂವಿಧಾನಿಕ ಹುದ್ದೆ. ಇಂತಹ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಅವರು ಕೊಡಗಿನ ಭೇಟಿ ಮಾಡುತ್ತಿರುವ ಬಗ್ಗೆ ಪೂರ್ಣ ಮಾಹಿತಿ ಇದ್ದರೂ ಮೊಟ್ಟೆ ಎಸೆಯುವಂತಹ ಅಹಿತಕರ ಘಟನೆ ನಡೆದಿದೆ. ಇದು ಜಿಲ್ಲಾಡಳಿತ ಸೇರಿದಂತೆ ಸರ್ಕಾರದ ಪೂರ್ಣ ವೈಫಲ್ಯವಾಗಿದೆ. ಈ ಬಗ್ಗೆ ನ್ಯಾಯಾಧೀಶರ ಮೂಲಕ ಸಮಗ್ರವಾಗಿ ‘ನ್ಯಾಯಾಂಗ ತನಿಖೆ’ ಯಾಗಬೇಕೆಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ಕೊಡಗು ಭೇಟಿಯ ಸಂದರ್ಭ ಸೂಕ್ತ ಭದ್ರತೆ ಒದಗಿಸದೆ ಜಿಲ್ಲಾಡಳಿತ ಮೊದಲ ತಪ್ಪನ್ನೆಸಗಿದ್ದರೆ, ಇದೀಗ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭವೇ ಮತ್ತೊಂದು ಪಕ್ಷ ಜನ ಜಾಗೃತಿ ಸಮಾವೇಶ ನಡೆಸುತ್ತಿರುವ ಕಾರಣ ನೀಡಿ ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಗೊಳಿಸುವ ಮೂಲಕ ಎರಡನೇ ತಪ್ಪು ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಸಂವಿಧಾನಬದ್ಧವಾಗಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ನಡೆಯದಂತೆ ನಿಷೇಧಾಜ್ಞೆ ಹೇರಿದೆ. ಯಾವುದೇ ಸಕಾರಣಗಳಿಲ್ಲದೆ ಬಿಜೆಪಿ ಮತ್ತು ಜಿಲ್ಲಾಡಳಿತ ಸೇರಿಯೇ ಇಂತಹ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಯಾವತ್ತೂ ಕಾನೂನನ್ನು ಗೌರವಿಸುವ ಪಕ್ಷವಾಗಿದೆ. ನಿಷೇಧಾಜ್ಞೆ ತೆರವುಗೊಂಡ ಬಳಿಕ ಮತ್ತೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾಗಿರುವ ಹಾನಿ, ಸಂಕಷ್ಟದಲ್ಲಿರುವವರಿಗೆ ದೊರಕಿರುವ ಸೌಲಭ್ಯ, ಅಗಿರುವ  ಸಂಕಷ್ಟಗಳನ್ನು ಖುದ್ದು ಸ್ಥಳಕ್ಕೆ ತೆರಳಿ, ಸ್ಥಳೀಯರೊಂದಿಗೆ ಬೆರೆತು ತಿಳಿದುಕೊಳ್ಳುವ ಮೂಲಕ, ಅವರಿಗೆ ಹೆಚ್ಚಿನ ನೆರವು ಬೇಕಿದ್ದಲ್ಲಿ ದೊರಕಿಸುವ ಚಿಂತನೆಗಳಡಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದರು. ಇಂಟಲಿಜೆನ್ಸ್ ವೈಫಲ್ಯದಿಂದ ಮೊಟ್ಟೆ ಎಸೆದ ಘಟನೆ ನಡೆದಿದೆ. ಪಟ್ಟಭದ್ರ ಹಿತಾಸಕ್ತಿಗಳು ಸುಂದರ ಕೊಡಗಿನ ಶ್ರೀಮಂತ ಸಂಸ್ಕೃತಿಗೆ ‘ಮಸಿ’ ಬಳೆದಿದ್ದಾರೆ ಎಂದು ಟೀಕಿಸಿದರು.

ಅಹಿತಕರ ಘಟನೆಗಳ ಅವಧಿಯಲ್ಲಿ ಕೊಡಗು ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರೀಯವಾಗಿದೆ. ಪ್ರಸ್ತುತ ಜಿಲ್ಲಾಡಳಿತ ಎನ್ನುವುದು ಪಟ್ಟಭದ್ರರ ಕೈಯಲ್ಲಿ ಸೇರಿಕೊಂಡಿದೆಯೆಂದು ಆರೋಪಿಸಿದರು.

► ಬಂಧನಕ್ಕೆ ಒತ್ತಾಯ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚಂದ್ರಮೌಳಿ ಮಾತನಾಡಿ, ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಪಾಲ್ಗೊಂಡಿರುವ ಎಲ್ಲರನ್ನು ಬಂಧಿಸುವುದಾಗಿ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದರು. ಆದರೆ ಏನು ನಡೆದಿದೆಯೆಂದು ಕೇಳಿದ ಅವರು, ದುಷ್ಕೃತ್ಯದಲ್ಲಿ ಪಾಲ್ಗೊಂಡ ನಗರಸಭೆಯ ನಾಮನಿರ್ದೇಶಿತ ಸದಸ್ಯರೊಬ್ಬರನ್ನು ನೀವು ಬಂಧಿಸುತ್ತೀರೋ ನಾವೇ ನಿಮ್ಮ ಮುಂದೆ ತಂದು ನಿಲ್ಲ್ಲಿಸಬೇಕೋ ಎಂದ ಅವರು, ಕಾಂಗ್ರೆಸ್ ಯಾವತ್ತೂ ಸಂಘರ್ಷಕ್ಕೆ ಇಳಿದಿಲ್ಲ, ಇಳಿದಿದ್ದರೆ ಏನಾಗುತಿತ್ತೆಂದು ಪ್ರಶ್ನಿಸಿದರು. ಜನರ ಭಾವನೆಗಳನ್ನು ಕೆರಳಿಸುವ ಇಂತಹ ಪ್ರಯತ್ನಗಳು ಜಾಸ್ತಿ ದಿನ ನಡೆಯುವುದಿಲ್ಲವೆಂದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಸಚಿವ ಬಿ.ಎ.ಜೀವಿಜಯ, ಪಿರಿಯಾಪಟ್ಟಣ ಮಾಜಿ ಶಾಸಕ ವೆಂಕಟೇಶ್, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News