ಬಾಬಾ ಬುಡಾನ್ ಸ್ವಾಮಿ ದರ್ಗಾದಲ್ಲಿ ಹಿಂದೂ ಅರ್ಚಕರ ನೇಮಕ ಸರಕಾರದ ಕೋಮುವಾದಿ ನಿಲುವು: ನಾಸಿರ್ ಪಾಷಾ ಶಾಖಾದ್ರಿ

Update: 2022-08-23 15:56 GMT

ಚಿಕ್ಕಮಗಳೂರು, ಆ.23: ಗುರುದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದಲ್ಲಿ ಹಿಂದೂ ಅರ್ಚಕರನ್ನು ನೇಮಿಸುವ ಹಾಗೂ ಶಾಖಾದ್ರಿಗಳ ಆಡಳಿತವನ್ನು ಕಿತ್ತು ಹಾಕಿ ಸರಕಾರಿ ಸಮಿತಿಯನ್ನು ರಚಿಸಲು ಸರಕಾರ ಆದೇಶಿಸಿರುವುದು ರಾಜ್ಯ ಸರಕಾರದ ಕೋಮುವಾದಿ ಆದೇಶವಾಗಿದೆ ಎಂದು ಶಾಖಾದ್ರಿ ಕುಟುಂಬಸ್ಥರಾದ ನಾಸಿರ್ ಪಾಷಾ ಶಾಖಾದ್ರಿ ಟೀಕಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾದಲ್ಲಿ ಹಿಂದೂ ಅರ್ಚರನ್ನು ನೇಮಿಸುವ ಹೊಸ ಪದ್ಧತಿಯ ತೀರ್ಪು ಖಂಡನೀಯ. ಇದರಿಂದಾಗಿ ಜಿಲ್ಲೆಯ ಸೌಹಾರ್ದ ಪರಂಪರೆಗೆ ಹಿನ್ನಡೆ ಆಗಿದೆ. ದರ್ಗಾದ ಆವರಣದಲ್ಲಿ ನಮ್ಮ ಅಜ್ಜ, ಮುತ್ತಜ್ಜರ ಗೋರಿಗಳು ಹಾಗೂ ಬಾಬಾ ಬುಡಾನ್ ವಂಶಸ್ಥರು, ವಾರಸುದಾರರು ಇರುವಾಗ  ಸಮಿತಿಯನ್ನು ರಚಿಸುವ ಸರಕಾರದ ಆದೇಶ ಬಿಜೆಪಿ ಸರಕಾರದ ಕೋಮುವಾದಿ ನಿಲುವನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

ಬಿಜೆಪಿ ಸರಕಾರದ ಈ ಆದೇಶ 1991ರ ಕಾಯ್ದೆಯ ಸಂಪೂರ್ಣ ಉಲಂಘನೆಯಾಗಿದೆ. ನೂರಾರು ವರ್ಷಗಳಿಂದ ಇಲ್ಲದ ಆಚರಣೆಗಳನ್ನು ಅಧಿಕೃತಗೊಳಿಸುವುದು ಕಾನೂನು ಬಾಹಿರವಾಗಿದೆ. ಬಾಬಾ ಬುಡನ್ ದರ್ಗಾದ ಆವರಣದಲ್ಲಿ ನಮ್ಮ ವಂಶಸ್ಥರ ಗೋರಿಗಳನ್ನು ಕಾಣಬಹುದು. ಆದರೂ ಕೂಡ ಅಲ್ಲಿ ಅರ್ಚಕರ ನೇಮಕ ಮಾಡಲೇಬೇಕು ಎಂದು ಪಣತೊಟ್ಟಿರುವುದು ಬಿಜೆಪಿ ಸರಕಾರದ ನೀಚ ಆಡಳಿತವನ್ನು ಎತ್ತಿ ತೋರಿಸಿದೆ. ಬಿಜೆಪಿ ಸರಕಾರ ಸಂವಿಧಾನಕ್ಕೆ ಗೌರವ ಇಲ್ಲದ ರೀತಿಯಲ್ಲಿ ಆಡಳಿತ ನಡೆಸುವ ಪ್ರಯತ್ನದ ಭಾಗ ಇದಾಗಿದೆ. ವಿರೋಧ ಪಕ್ಷಗಳು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ವಿಪರ್ಯಾಸವಾಗಿದೆ. ಕಾಂಗ್ರೆಸ್, ಜೆಡಿಎಸ್‍ನಂತಹ ಪಕ್ಷಗಳು ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಪಡೆಯಲು ಮಾತ್ರ ಸೀಮಿತವಾಗಿದೆ. ಬಾಬಾ ಬುಡಾನ್ ದರ್ಗಾಕ್ಕೆ ಸಂಬಂಧಿಸಿದ ಯಾವುದೇ ಹೋರಾಟದಲ್ಲಿ ಭಾಗವಹಿಸದೇ ಈ ಪಕ್ಷಗಳು ಹಿಂದೆ ಸರಿದಿರುವುದು ಈ ಮೂಲಕ ಸ್ಪಷ್ಟ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ ಜನರು ಬಾಬಾ ಬುಡಾನ್ ಸ್ವಾಮಿ ಅವರ ಪ್ರಯತ್ನದಿಂದ ಕಾಫಿ ಜಿಲ್ಲೆಗೆ ಬಂದಿರುವ ಇತಿಹಾಸವನ್ನು ಮರೆಯದೇ ಆ ಮಹಾನ್ ವ್ಯಕ್ತಿಯ ಪರ  ನಿಲ್ಲಬೇಕು. ಅವರ ಪ್ರಯತ್ನದಿಂದ ಹಲವು ಕುಟುಂಬಗಳ ಜೀವನ ನಡೆಯುತ್ತಿದೆ. ಅವರು ಕೊಟ್ಟಿರುವ ಅನ್ನದ ತಟ್ಟೆಗೆ ದ್ರೋಹ ಬಗೆಯುವ ಕೆಲಸ ಮಾಡಬಾರದು. ಅಕ್ರಮವಾಗಿ ಬಾಬಾ ಬುಡಾನ್ ದರ್ಗಾವನ್ನು ವಶಕ್ಕೆ ಪಡಯುವ ಬಿಜೆಪಿ ಸರಕಾರ ಹುನ್ನಾರ ನಡೆಸುತ್ತಿದೆ. ರಾಜ್ಯ ಸರಕಾರ ಈ ರೀತಿಯ ಅನ್ಯಾಯದ ನಿರ್ಧಾರವನ್ನು ರದ್ದುಗೊಳಿಸಿ ಹಿಂದಿನ ರೀತಿಯಲ್ಲಿ ಶಾಖಾದ್ರಿ ನೇತೃತ್ವದಲ್ಲಿ ಸಮಿತಿ ರಚಿಸಿ ಸಜ್ಜಾದ್ ನಶೀನ್ ಅವರ  ನಾಯಕತ್ವದಲ್ಲಿ ದರ್ಗಾದ ಆಡಳಿತಕ್ಕೆ ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News