ಮಂಗಗಳ ಹಾವಳಿ ತಡೆಗೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ: ಹೈಕೋರ್ಟ್
ಬೆಂಗಳೂರು, ಆ.23: ನಗರ ಪ್ರದೇಶಗಳಲ್ಲಿ ಮಂಗಗಳ (Monkey) ಹಾವಳಿ ನಿಯಂತ್ರಿಸಲು ಸರಕಾರ ರೂಪಿಸಿರುವ ಮಂಗಗಳನ್ನು ಸೆರೆಹಿಡಿಯುವ ಹಾಗೂ ಮರುವಸತಿ ಕಲ್ಪಿಸುವ ಬಗ್ಗೆ ನಿರ್ದಿಷ್ಟ ಕಾರ್ಯಾಚರಣೆ ವಿಧಾನವನ್ನು(ಎಸ್‍ಒಪಿ) ಆಯಾ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ಮಂಗಗಳ ನಿಯಂತ್ರಣ ಅಥವಾ ಹಾವಳಿ ತಡೆ ಸಂಬಂಧ ಸರಕಾರ ಸ್ಪಷ್ಟ ಮಾರ್ಗಸೂಚಿ ರೂಪಿಸಿ, ಆ ಎಸ್‍ಒಪಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಅರಣ್ಯ ಇಲಾಖೆ ಹೇಗೆ ಮಂಗಗಳನ್ನು ಹಿಡಿಯಬೇಕು ಮತ್ತು ಆನಂತರ ಹೇಗೆ ಅವುಗಳನ್ನು ಸ್ಥಳಾಂತರ ಮಾಡಬೇಕು ಎಂಬುದನ್ನು ವಿವರಿಸಲಾಗಿದೆ. ಅದಕ್ಕಾಗಿ ವೆಬ್‍ಸೈಟ್ ಕೂಡ ಆರಂಭಿಸಲಾಗಿದೆ ಎಂದು ಹೇಳಿದೆ.
ಅಲ್ಲದೆ ಅರಣ್ಯ ಇಲಾಖೆ, ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆಗಳು ಮಂಗಗಳ ಹಾವಳಿ ತಡೆಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ನ್ಯಾಯಪೀಠವು ಆದೇಶಿಸಿದೆ.