×
Ad

ಸಹಕಾರ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ: KRS ಆರೋಪ

Update: 2022-08-23 23:52 IST

ಬೆಂಗಳೂರು, ಆ.23: ರಾಜ್ಯವನ್ನು ಆಳಿದ ಸರಕಾರಗಳು ಭ್ರಷ್ಟಾಚಾರ ಮಾಡುವುದರಲ್ಲಿ ಪೈಪೋಟಿ ನಡೆಸುತ್ತಿವೆ. ಹಾಗಾಗಿ ಇಂದು ಬಿಜೆಪಿ ಸರಕಾರವು ಶೇ.40ರಷ್ಟು ಕಮಿಷನ್ ಪಡೆಯುವ ಸರಕಾರವಾಗಿ ಜಗಜ್ಜಾಹೀರಾಗಿದೆ. ಸಹಕಾರ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದಿಂದಾಗಿ ಇಂದು ರಾಜ್ಯದ ಬಹುತೇಕ ಕೋ-ಆಪರೇಟಿವ್ ಬ್ಯಾಂಕ್‍ಗಳು ದಿವಾಳಿಯಾಗಿವೆ ಎಂದು ಕೆಆರ್ ಎಸ್ ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ. 

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ಮಾತನಾಡಿ, ಸಹಕಾರ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಡಳಿತ, ನಿರ್ಲಕ್ಷ್ಯದ ಕಾರಣದಿಂದಾಗಿ, ಬಹುತೇಕ ಕೋ-ಆಪರೇಟಿವ್ ಬ್ಯಾಂಕ್‍ಗಳ ಗ್ರಾಹಕರು ಬೀದಿಗೆ ಬಂದಿದ್ದಾರೆ. ಹಲವಾರು ಠೇವಣಿದಾರರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಡಿಸಿಸಿ ಬ್ಯಾಂಕುಗಳು ನಿರಂತರವಾಗಿ ನಷ್ಟದಲ್ಲಿದ್ದು, ಭ್ರಷ್ಟ ಬಿಜೆಪಿ ಸರಕಾರವು ಸಾರ್ವಜನಿಕರ ಹಣದಿಂದ ಪಟ್ಟಭದ್ರರ ಹಿತವನ್ನು ಕಾಯುತ್ತಿದೆ ಎಂದು ಆರೋಪಿಸಿದರು.

ಕೃಷಿ ಸಾಲಗಳಲ್ಲಿ ಅಲ್ಪಾವಧಿ ಸಾಲಕ್ಕೆ ಸಂಪೂರ್ಣ ಬಡ್ಡಿ ಸಹಾಯಧನವಿದ್ದು, ಇದನ್ನು ಒಂದು ವರ್ಷದಿಂದ ವರ್ಷಕ್ಕೆ ಮರುಪಾವತಿ ಮಾಡಿ, ಮುಂದಿನ ಆರ್ಥಿಕ ವರ್ಷದಲ್ಲಿ ಮರುಜಾರಿಗೊಳಿಸಬೇಕು. ಒಂದು ವೇಳೆ ಮರುಪಾವತಿ ಮಾಡಲು ಆಗದಿದ್ದಲ್ಲ, ನಬಾರ್ಡ್ ಸೂಚನೆ ಅನ್ವಯ ಶೇ.7ರ ಬಡ್ಡಿದರ ಪಾವತಿಸಬೇಕು. ಅಂತಹ ಫಲಾನುಭವಿಗಳಿಗೆ ಸರಕಾರದ ಬಡ್ಡಿ ಸಹಾಯಧನ ಆ ವರ್ಷದಲ್ಲಿ ಲಭ್ಯವಿರುವುದಿಲ್ಲ. ಬಡ್ಡಿ ಸಹಾಯಧನ ಪಡೆದಿದ್ದರೆ ಸರಕಾರಕ್ಕೆ ಹಿಂತಿರುಗಿಸಬೇಕು ಆದರೆ ಒಂದು ಪೈಸೆಯನ್ನು ಹಿಂತಿರುಗಿಸಿದ ಮಾಹಿತಿಯೇ ಇಲ್ಲ ಎಂದು ಅವರು ಕಿಡಿಕಾರಿದರು.

ರಾಜ್ಯ ಸರಕಾರವು ರೈತರಿಗೆ ವಿತರಿಸುವ ಕೃಷಿಸಾಲ, ಬಡವರ ಬಂಧು ಯೋಜನೆ, ಕಾಯಕ ಯೋಜನೆ, ಹೈನುಗಾರಿಕೆ ಬಂಡವಾಳ ಸಾಲ ಇತರೆ ಯಾವುದೇ ಸರಕಾರದ ಸಹಾಯಧನ ಯೋಜನೆಗಳಲ್ಲಿ ಮಾಹಿತಿಯನ್ನು ಜಿಲ್ಲಾ ನಿಬಂಧಕರು ಮಾಹಿತಿ ಹಕ್ಕಿನಡಿಯಲ್ಲಿ ನೀಡಬೇಕು. ಆದರೆ, ನಿಬಂಧಕರು ಅರ್ಜಿಯನ್ನು ಕೃಷಿಪತ್ತಿನ ಸಂಘಗಳಿಗೆ ವರ್ಗಾಹಿಸುತ್ತಾರೆ. ಸಂಘಗಳು ಮಾಹಿತಿಯನ್ನು ನೀಡಲು ನಿರಾಕರಿಸುತ್ತವೆ ಎಂದು ಹೇಳಿದರು. 

ಸಚಿವ ಮಾಧುಸ್ವಾಮಿ ಆಡಿಯೋ ಬಹಿರಂಗ ಪ್ರಕರಣವನ್ನು ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಸಹಕಾರ ಸಚಿವರು ಹೇಳುತ್ತಿದ್ದಾರೆ. ಈ ವಿಚಾರವಾಗಿ ಪಕ್ಷದ ವತಿಯಿಂದ ಅನೇಕ ದೂರುಗಳನ್ನು ನೀಡಲಾಗಿದೆ. ಇದರ ಬಗ್ಗೆ ಗಮನ ಹರಿಸದೇ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಾರೆ. ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‍ನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಸಾಲವನ್ನು ನೀಡಲಾಗಿದೆ? ಎಷ್ಟು ಸಾಲವನ್ನು ಮರುಪಾವತಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಬೇಕು.

-ದೀಪಕ್ ಸಿ.ಎನ್., ಕೆಆರ್‍ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News