×
Ad

ಹನಿಟ್ರ್ಯಾಪ್ ಪ್ರಕರಣ: ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಬಂಧನಕ್ಕೆ ಸಿಐಟಿಯು ಆಗ್ರಹ

Update: 2022-08-24 00:10 IST

ಮಂಡ್ಯ, ಆ.23: ಹನಿಟ್ರ್ಯಾಪ್ ಒಳಗಾದ ಬಗ್ಗೆ ದೂರು ನೀಡಿರುವ ಬಿಜೆಪಿ ಮುಖಂಡ ಹಾಗೂ ಶ್ರೀನಿಧಿ ಗೋಲ್ಡ್ ಮಾಲಕ ಜಗನ್ನಾಥ್ ಶೆಟ್ಟಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಈ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಿ, ಜಗನ್ನಾಥ್ ಶೆಟ್ಟಿಯನ್ನು ದೂರುದಾರ ಎಂದು ಪರಿಗಣಿಸಿದರೆ ಸಮಾಜಕ್ಕೆ ಆತನೊಬ್ಬ ಅಮಾಯಕ ಎಂದು ಬಿಂಬಿತವಾಗುವುದಿಲ್ಲ.” ಎಂದು ಹೇಳಿದ್ದಾರೆ.

“ಹೆಣ್ಣೆಂದರೆ ಭೋಗದ ವಸ್ತುವೆಂದು ದುರುಪಯೋಗ ಮಾಡಿಕೊಂಡಿರುವ ಜಗನ್ನಾಥ್ ಶೆಟ್ಟಿಯನ್ನು ತೀವ್ರತರ ವಿಚಾರಣೆಗೆ ಒಳಪಡಿಸಿದರೆ ಪ್ರಕರಣದ ಆಳ ತಿಳಿಯುತ್ತದೆ. ಆ ದಿಕ್ಕಿನಲ್ಲಿ ತನಿಖೆ ಚುರುಕುಗೊಳಿಸಿ ತಪ್ಪಿತ್ತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಈ ನಡುವೆ ಜಗನ್ನಾಥ್ ಶೆಟ್ಟಿ ತನ್ನನ್ನು ಅಪರಿಚಿತರು ಫೆ.26 ರಂದು ಅಪಹರಿಸಿ ಮೈಸೂರಿನ ಹೋಟೆಲೊಂದಕ್ಕೆ ಕರೆದೊಯ್ದು ಹನಿಟ್ರ್ಯಾಪ್‍ಗೆ ಒಳಪಡಿಸಿ ಹಣ ದೋಚಿದ್ದಾರೆ ಎಂದು ಹಲವು ತಿಂಗಳ ನಂತರ, ಅಂದರೆ, ಆ.19 ರಂದು ಪೊಲೀಸರಿಗೆ ತಡವಾಗಿ ದೂರು ನೀಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ನಾಥ್ ಶೆಟ್ಟಿ ಅವರ ದೂರನ್ನು ಆಧರಿಸಿ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಉಳಿದವರ ಬಂಧನಕ್ಕೆ ಕ್ರಮವಹಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಅವಶ್ಯವಿದ್ದರೆ ಜಗನ್ನಾಥ್ ಶೆಟ್ಟಿ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಎಸ್ಪಿ ಎನ್.ಯತೀಶ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News