ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು: ಪ್ರಿಯಾಂಕ್ ಖರ್ಗೆ

Update: 2022-08-24 13:30 GMT

ಬೆಂಗಳೂರು, ಆ.24: ಪೂರ್ಣ ಪ್ರಮಾಣದಲ್ಲಿ ನಾಸ್ತಿಕವಾದಿ ಆಗಿದ್ದ ಸಾವರ್ಕರ್ (Vinayak Damodar Savarkar) ಅವರು, ಗೋಮಾಂಸವನ್ನು ಸಹ ಸೇವನೆ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ. 

ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾವರ್ಕರ್ ಅವರು ಗೋಮಾಂಸ ತಿಂದಿದ್ದರು. ಬ್ರಿಟನ್‍ನಲ್ಲಿದ್ದಾಗ ಅವರು ಸೇವನೆ ಮಾಡಿದ್ದರು.ಆದರೆ, ಈ ಬಗ್ಗೆ ಬಿಜೆಪಿಯವರಿಗೆ ಪ್ರಶ್ನಿಸಿದರೆ, ಅವರು ಜೆರ್ಸಿ ಗೋವನ್ನು ತಿಂದಿದ್ದರು ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಮಾಜಾಯಿಷಿ ನೀಡುತ್ತಾರೆ ಎಂದರು.

ಅಷ್ಟೇ ಮಾತ್ರವಲ್ಲದೆ, ಗೋ ಮೂತ್ರ ಕುಡಿದರೆ ಬುದ್ಧಿ ಹತ್ಯೆಯಾಗುತ್ತದೆ ಎಂದು ಸಾರ್ವಕರ್ ಹೇಳಿದ್ದಾರೆ.ಆದರೆ, ಬಿಜೆಪಿ ಹಾಗೂ ಆರೆಸ್ಸೆಸ್‍ನವರು ಸಾರ್ವಕರ್ ಅವರನ್ನು ಹಿಂದುತ್ವದ ಪಿತಾಮಹಾ ಎಂದು ನಂಬಿದ್ದಾರೆ. ಇದೇ ಸಾರ್ವಕರ್ ಅವರು ಗೋಮಾತೆಯನ್ನು ಪೂಜಿಸಬಾರದು. ಗೋವು ಪವಿತ್ರ ಪ್ರಾಣಿ ಅಲ್ಲ ಉಪಯೋಗದ ಪ್ರಾಣಿ ಎಂದು ಹೇಳಿದ್ದಾರೆ. 

ಅವರ  ಸ್ವಂತ ಲೇಖನದಲ್ಲಿ ‘ಗೋವು ಎತ್ತುಗಳಿಗೆ ಮಾತ್ರ ಮಾತೆಯಾಗಿರುತ್ತದೆಯೇ ಹೊರತು ಹಿಂದೂಗಳಿಗಲ್ಲ. ಹಿಂದುತ್ವ ಕೇವಲ ಗೋವಿನ ನಾಲ್ಕು ಕಾಲುಗಳ ಮೇಲೆ ನಿಲ್ಲುವುದಿಲ್ಲ. ಹೀಗಾಗಿ ಗೋವಿನ ಹೊಟ್ಟೆಯೊಳಗೆ 33 ಕೋಟಿ ದೇವತೆಗಳನ್ನು ತುಂಬಲಾಗಿದೆ. ಹಿಂದೂಗಳು ಗೋವು ಪೂಜೆ ಬಿಟ್ಟು ಅಪಾರ ಶಕ್ತಿ ಹೊಂದಿರುವ ಮನುಷ್ಯರ ಪೂಜೆ ಮಾಡಿ ಎಂದು ಹೇಳಿದ್ದಾರೆ ಎಂದರು. 

ಸಾರ್ವಕರ್ ಗೋ ಮಾತೆ ಪೂಜೆ ಮಾಡಬಾರದು ಎಂದು ಹೇಳಿರುವಾಗ ಇವರು ಗೋಹತ್ಯೆ ನಿಷೇಧ ಹಿಂಪಡೆಯುತ್ತಾರಾ, ಗೋಮೂತ್ರ ಕುಡಿಯುವುದು ನಿಲ್ಲಿಸುತ್ತಾರಾ, ಗೋ ಮಾತೆ ಹೆಸರಲ್ಲಿ ನಡೆಯುತ್ತಿರುವ ಥಳಿತ ಪ್ರಕರಣ ನಿಲ್ಲಿಸುತ್ತಾರಾ ಎಂದು ಖಾರವಾಗಿ ಪ್ರಶ್ನಿಸಿದರು.

ಧರ್ಮದ ಆಧಾರದ ಮೇಲೆ ನಮ್ಮ ದೇಶ ವಿಭಜನೆ ಮಾಡಬೇಕು ಎಂದು ಮೊದಲು ಧ್ವನಿ ಎತ್ತಿದವರ ಪೂಜೆ ಯಾಕೆ ಮಾಡುತ್ತಿದ್ದೀರಿ. ಇನ್ನೂ, ಸಾವರ್ಕರ್ ನಾಸ್ತಿಕರಾಗಿದ್ದರು, ಈಗ ಪ್ರತಿ ಗಣೇಶೋತ್ಸವದ ಪೆಂಡಾಲ್‍ನಲ್ಲಿ ಸಾವಕರ್ ಫೋಟೋ ಇಡುತ್ತಿರುವುದೇಕೆ?.ಆ ಮೂಲಕ ದೇವರು ಮತ್ತು ಸಾವರ್ಕರ್‍ಗೆ ಅಪಮಾನ ಮಾಡುತ್ತಿರುವುದೇಕೆ ಎಂದು ಹೇಳಿದರು.

ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳನ್ನು ಮಾಡದ ಬಿಜೆಪಿ ಸರಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾವರ್ಕರ್ ಉತ್ಸವವನ್ನು ಮಾಡುತ್ತಿದೆ. ಅದು ಅಲ್ಲದೆ, ಸಾರ್ವಕರ್ ಅವರು ಸ್ವಾತಂತ್ರ್ಯ ಹೋರಾಟ ಮಾಡುವ ಉದ್ದೇಶ ಇದ್ದಿದ್ದರೆ ಅವರು ವಿದೇಶದಲ್ಲಿ ಬಂಧನವಾದಾಗ ಭಾರತಕ್ಕೆ ಬರಲು ಯಾಕೆ ಒಪ್ಪಲಿಲ್ಲ ಎಂದು.

ಅದೇ ರೀತಿ,  ಸೆರೆವಾಸದಲ್ಲಿದ್ದಾಗ ಸಾವರ್ಕರ್ ಅವರು ಬ್ರಿಟೀಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದಿದ್ದು ಯಾಕೆ?. ಈ ಕ್ಷಮಾಪಣಾ ಪತ್ರಗಳನ್ನು ಬಿಜೆಪಿಯವರು ಮಾಸ್ಟರ್ ಸ್ಟ್ರೋಕ್ ಎನ್ನುತ್ತಿದ್ದಾರೆ.ಆದರೆ, ಒಂದು ವೇಳೆ ಪರಿಗಣಿಸಿದರೂ, ಅವರು ಜೈಲಿಂದ ಬಿಡುಗಡೆಯಾದ ನಂತರ ಅವರು ಎಷ್ಟು ಹೋರಾಟ ಮಾಡಿದರು, ಅದರ ಪರಿಣಾಮಗಳೇನು ಎಂದು ವಿವರಿಸಲಿ ಎಂದು ಸವಾಲು ಹಾಕಿದರು.

ಸ್ವತಃ ‘ವೀರ್’ ಎಂದು ಬರೆದುಕೊಂಡ ಸಾವರ್ಕರ್..!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಮಹಾತ್ಮ ಎಂಬ ಬಿರುದು ಕೊಟ್ಟಿದ್ದು, ರವೀಂದ್ರ ನಾಥ ಠಾಗೋರ್, ಸುಭಾμï ಚಂದ್ರ ಬೋಸ್ ಅವರಿಗೆ ನೇತಾಜಿ ಎಂಬ ಬಿರುದು ಕೊಟ್ಟಿದ್ದು ಅಜಾದ್ ಹಿಂದ್ ಫೌಜ್‍ನ ಸದಸ್ಯರು. ಆದರೆ, ಸಾವರ್ಕರ್ ಅವರಿಗೆ ವೀರ್ ಎಂದು ಬಿರುದು ಕೊಟ್ಟವರು ಯಾರು ಎಂದು ಹುಡುಕಿದಾಗ, 

1923ರಲ್ಲಿ ‘ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್ ಎಂಬ ಪುಸ್ತಕ ಹೊರಬರುತ್ತದೆ. ಅದರ ಲೇಖಕರು ಚಿತ್ರಗುಪ್ತ. ಅದರಲ್ಲಿ ಸಾವರ್ಕರ್ ಅವರನ್ನು ಇಂದ್ರ, ಚಂದ್ರ, ಹೋರಾಟದ ಮನೋಭಾವ, ಕಿಚ್ಚು, ದೇಶಪ್ರೇಮದ ಬಗ್ಗೆ ಮಿತಿಮೀರಿ ವರ್ಣನೆ ಮಾಡಲಾಗಿತ್ತು. 
ಈ ಪುಸ್ತಕದಲ್ಲಿ ಸಾರ್ವಕರ್ ಅವರನ್ನು ‘ವೀರ್ ಸಾವರ್ಕರ್’ ಎಂದು ತಿಳಿಸಿರುತ್ತಾರೆ. 

----------------------------

1966ರಲ್ಲಿ ಸಾವರ್ಕರ್ ಅವರು ನಿಧನರಾದ ನಂತರ, 1987ರಲ್ಲಿ ಈ ಪುಸ್ತಕ 2ನೆ ಆವೃತ್ತಿ ಮುದ್ರಣಕ್ಕೆ ಹೋದಾಗ ಮೊದಲ ಆವೃತ್ತಿಯ ಮುದ್ರಣಕಾರರಾದ ರವೀಂದ್ರ ರಾಮದಾಸ್ ಅವರು ಮುನ್ನುಡಿ ಬರೆದಾಗ ಈ ಪುಸ್ತಕದ ಲೇಖಕ ಚಿತ್ರಗುಪ್ತ ಬೇರಾರೂ ಅಲ್ಲ, ಸ್ವತಃ ಸಾವರ್ಕರ್ ಎಂಬ ಅಂಶವನ್ನು ತಿಳಿಸುತ್ತಾರೆ. ಅಲ್ಲಿಗೆ ಸಾವರ್ಕರ್ ಅವರೇ ತಮಗೆ ತಾವೇ ‘ವೀರ್’ ಎಂದು ಬಿರುದು ಕೊಟ್ಟುಕೊಂಡಿದ್ದಾರೆ.

-ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಶಾಸಕ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News