ಆರೋಪದಲ್ಲಿ ಹುರುಳಿಲ್ಲ ಎಂದಾದರೆ, ಕೆಂಪಣ್ಣ ವಿರುದ್ಧ ಈವರೆಗೆ ಯಾಕೆ ಪ್ರಕರಣ ದಾಖಲಿಸಿಲ್ಲ: ಡಿಕೆಶಿ ಪ್ರಶ್ನೆ

Update: 2022-08-24 14:27 GMT

ಬೆಂಗಳೂರು, ಆ.24: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯದಲ್ಲಿನ ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆದು ಒಂದು ವರ್ಷವಾಗಿದೆ. ಈಗ ಮುಖ್ಯಮಂತ್ರಿ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳುತ್ತಿದ್ದಾರೆ. ಕೆಂಪಣ್ಣ ಆರೋಪದಲ್ಲಿ ಹುರುಳಿಲ್ಲ ಎಂದಾದರೆ ಅವರ ವಿರುದ್ಧ ಇದುವರೆಗೂ ಯಾಕೆ ಪ್ರಕರಣ ದಾಖಲಿಸಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸರಕಾರದ ವಿರುದ್ಧ ಮಾಡಿರುವ ಅರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಬುಧವಾರ ನಗರದಲ್ಲಿ ಪ್ರತಿಕ್ರಿಯಿಸಿದರು.

ಕೆಂಪಣ್ಣ ತಮ್ಮ ಬಳಿ ಎಲ್ಲ ರೀತಿಯ ಆಧಾರ ಇದೆ ಎಂದು ಹೇಳುತ್ತಿದ್ದರೂ ಯಾಕೆ ತನಿಖೆ ಮಾಡುತ್ತಿಲ್ಲ? ನೀವು ಪ್ರಾಮಾಣಿಕರಾಗಿದ್ದರೆ ಭಯ ಯಾಕೆ? ಅವರ ಪಕ್ಷದ ಕಾರ್ಯಕರ್ತನಿಗೆ ಅನ್ಯಾಯವಾಗಿದ್ದು, ಆ ಪ್ರಕರಣದಲ್ಲಿ ಸಚಿವರ ತನಿಖೆ ಆಗುವ ಮುನ್ನವೇ ಮುಖ್ಯಮಂತ್ರಿ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಅವರು ಹೇಳಿದರು.

ತಪ್ಪಿತಸ್ಥರ ವಿರುದ್ಧ ತನಿಖೆ ಮಾಡದೆ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಮುತ್ತುರತ್ನಗಳನ್ನು ಅವರು ತಮ್ಮ ಬಳಿ ಇಟ್ಟುಕೊಳ್ಳಲಿ. ನಂತರ ನಾನು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ವಿರುದ್ಧ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕೆಂಪಣ್ಣ ಲೋಕಾಯುಕ್ತ ಬಳಿ ಸಾಕ್ಷಿ ನೀಡಲಿ ಎಂಬ ಮುಖ್ಯಮಂತ್ರಿ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಂಪಣ್ಣ ನಿಮಗೆ ಹಾಗೂ ಪ್ರಧಾನಿಗಳಿಗೆ ಪತ್ರ ಬರೆದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂಬುದು ನಮ್ಮ ಪ್ರಶ್ನೆ. ಆಗಲೇ ನೀವು ಲೋಕಾಯುಕ್ತ ಕೈಯಲ್ಲಿ ತನಿಖೆ ಮಾಡಿಸಬೇಕಿತ್ತು. ನೀವು ತಪ್ಪು ಮಾಡಿಲ್ಲ ಎಂದಾದರೆ ನ್ಯಾಯಾಂಗ ತನಿಖೆ ಮಾಡಿಸಿ. ಭಯ ಯಾಕೆ? ಇವರು ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ ಎಂದು ಕಿಡಿಗಾರಿದರು.

ಕೆಂಪಣ್ಣ ಸಚಿವ ಮುನಿರತ್ನ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಕೇಳಿದಾಗ ಉತ್ತರಿಸಿದ ಶಿವಕುಮಾರ್, ನೀವು ಹೇಳುತ್ತಿರುವ ಸಚಿವರ ವಿರುದ್ಧ ಚಾಮರಾಜನಗರ ಜಿಲ್ಲೆ ರೈತರು ನನಗೆ ನೇರವಾಗಿ ಹೇಳಿದ್ದಾರೆ. ಸರಕಾರದಿಂದ ಬರುವ ಪರಿಹಾರ ಹಣದಲ್ಲಿ ಸಚಿವರು ಶೇ.8 ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದರು.

ಕೇಂದ್ರ ಸರಕಾರ ಒಪ್ಪಿದರೆ ಅನ್ನ ಭಾಗ್ಯ ಯೋಜನೆ ನಿಲ್ಲಿಸುತ್ತೇವೆ ಎಂಬ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮನಮೋಹನ್ ಸಿಂಗ್ ಅವರ ಸರಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಗಿದೆ. ಹಾಗೆಂದು ಭ್ರಷ್ಟಾಚಾರ ವಿಚಾರ ಬಿಡುವುದಿಲ್ಲ. ನಾನಾ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಮಾಧ್ಯಮಗಳೇ ವರದಿ ಮಾಡುತ್ತಿವೆ ಎಂದರು.

ಆಗಸ್ಟ್ 15ರಂದು ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಕಾಂಗ್ರೆಸ್ ಪಕ್ಷ ಮೆಟ್ರೋ ಮಾರ್ಗಗಳನ್ನು ಬಳಕೆ ಮಾಡಿಕೊಳ್ಳಲು ವಿನೂತನ ಪ್ರಯತ್ನ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಮೆಟ್ರೋ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಉತ್ತಮ ಸಹಕಾರ ನೀಡಿದ್ದಾರೆ. ಅವರ ಸೇವೆ ಸ್ಮರಿಸಿ ಅವರನ್ನು ಅಭಿನಂದಿಸಲು ನಾನು ಹಾಗೂ ನಮ್ಮ ಕಾರ್ಯಾಧ್ಯಕ್ಷರು ಖುದ್ದಾಗಿ ಬಂದಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಸಂಪರ್ಕಿಸುವ ಆರು ಮಾರ್ಗಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಜನ ಅಲ್ಲಿಂದ ಮೆಟ್ರೋ ಮಾರ್ಗವಾಗಿ ಮೆಜೆಸ್ಟಿಕ್‍ಗೆ ಆಗಮಿಸಿದರು. ಅಂದು ಮೆಟ್ರೋ ಮೂಲಕ 8 ಲಕ್ಷಕ್ಕೂ ಹೆಚ್ಚು ಜನ ಸಂಚಾರ ಮಾಡಿದ್ದು ಹೊಸ ದಾಖಲೆ ನಿರ್ಮಾಣವಾಗಿದೆ. ನಾವು ಮೆಟ್ರೋ ಪ್ರಾಧಿಕಾರಕ್ಕೆ ಹಣ ಕಟ್ಟಿದ್ದು, ವಿನಾಯಿತಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News