×
Ad

ರಾಜ್ಯದ ವಿವಿಧೆಡೆ ಗುರುವಾರ ಮಳೆ ಸಾಧ್ಯತೆ; ಮಲೆನಾಡಿನಲ್ಲಿ ಯೆಲ್ಲೋ ಅಲರ್ಟ್

Update: 2022-08-24 19:51 IST

ಬೆಂಗಳೂರು, ಆ.24: ರಾಜ್ಯದ ಕರಾವಳಿ, ಮಲೆನಾಡಿನ ಭಾಗಗಳಲ್ಲಿ ಗುರುವಾರ ಮುಂಗಾರು ಮಳೆ (RAIN) ಚುರುಕಾಗಿರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಹಲವು ಕಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯ ಸಂಭವವಿದೆ. 60 ಕಿ.ಮೀ.ವರೆಗೂ ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ತುಮಕೂರು ಮತ್ತು ಕೋಲಾರ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಕೆಲವೊಮ್ಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  

ಮಧ್ಯಾಹದ ನಂತರ ಧಾರಾಕಾರ ಸುರಿದ ಮಳೆ

ಬೆಂಗಳೂರು ನಗರದ ಹಲವೆಡೆ ಬುಧವಾರ ಮಧ್ಯಾಹ್ನದ ನಂತರ ಧಾರಾಕಾರ ಮಳೆಯಾಗಿದೆ. ಶಾಂತಿನಗರ, ಮೆಜೆಸ್ಟಿಕ್, ಕಾರ್ಪೊರೇಷನ್, ರಿಚ್‍ಮಂಡ್ ಸರ್ಕಲ್, ಲಾಲ್‍ಬಾಗ್, ಬಸವನಗುಡಿ, ಜಯನಗರ, ಜೆಪಿ ನಗರ, ಕೋರಮಂಗಲ ಸೇರಿ ಹಲವೆಡೆ ಮಳೆಯಾಗಿದೆ.

ಮಳೆಯಿಂದಾಗಿ ರಸ್ತೆ ತುಂಬಾ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಹಲವು ಕಡೆ ವಿವಿಧ ಕಾಮಗಾರಿಗಳಿಗಾಗಿ ಬಿಬಿಎಂಪಿ ರಸ್ತೆಗಳನ್ನು ಅಗೆದಿದ್ದು, ಅಲ್ಲೆಲ್ಲಾ ನೀರು ನಿಂತುಕೊಂಡಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ.

ಮಧ್ಯಾಹ್ನದ ನಂತರ ಪ್ರಾರಂಭವಾದ ಮಳೆ ಸಂಜೆಯಾದರೂ ಸುರಿಯುತ್ತಲೇ ಇತ್ತು. ಇದರಿಂದ, ಆಫೀಸಿನಿಂದ ಮನೆಗೆ ವಾಪಾಸ್ ಹೊರಟ ಜನರು ರಸ್ತೆ ಮಧ್ಯೆಯೇ ಸಿಲುಕಿ, ಬಸ್ ಸ್ಟಾಂಡ್, ಅಂಗಡಿಗಳ ಕೆಳಗೆ ಆಶ್ರಯ ಪಡೆಯುತ್ತಿರುವ ದೃಶ್ಯ ಕಂಡು ಬಂದಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News