ಮದ್ರಸಾಗಳ ಶಿಕ್ಷಣದ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ: ಸಚಿವ ಬಿ.ಸಿ. ನಾಗೇಶ್

Update: 2022-08-24 15:30 GMT

ಬೆಂಗಳೂರು, ಆ.24:  'ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಮದ್ರಸಾಗಳಲ್ಲಿ ‘ಶಿಕ್ಷಣ ಹಕ್ಕು ಕಾಯ್ದೆ’  ಪ್ರಕಾರ ಸಿಗಬೇಕಾದ ಶಿಕ್ಷಣ ಸಿಗುತ್ತಿದೆಯೇ? ಇಲ್ಲವಾದರೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ? ಎಂಬ ಕುರಿತು ಮದರಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ. ನಾಗೇಶ್ (B. C. Nagesh) ತಿಳಿಸಿದ್ದಾರೆ.

ಬುಧವಾರ ಸಮಗ್ರ ಶಿಕ್ಷಣ ಕರ್ನಾಟಕ ಚೇರಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮದ್ರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿರುವ ಮದ್ರಸಾಗಳಲ್ಲಿನ ಶಿಕ್ಷಣದ ಸ್ವರೂಪ ತಿಳಿಯುವ ಅಗತ್ಯವಿದೆ. ಹೀಗಾಗಿ, ಮದ್ರಸಾಗಳಲ್ಲಿ ನೀಡುತ್ತಿರುವ ಶಿಕ್ಷಣದ ವ್ಯವಸ್ಥೆ ಕುರಿತು ಪರಿಶೀಲಿಸಲು ಮೊದಲ ಸಭೆಯನ್ನು ಇಂದು ನಡೆಸಲಾಗಿದೆ ಎಂದರು.

ಮದ್ರಸಾಗಳಿಗೆ ಹೋಗುವ ಮಕ್ಕಳಿಗೆ ನೀಡಲಾಗುತ್ತಿರುವ ಔಪಚಾರಿಕ ಶಿಕ್ಷಣದ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಮದ್ರಸಾಗಳಿಗೆ ಹೋಗುವ ಮಕ್ಕಳಿಗೆ ಔಪಚಾರಿಕ ಶಿಕ್ಷಣ ಸಿಗುತ್ತಿಲ್ಲ. ಮುಖ್ಯವಾಗಿ ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ವಿಜ್ಞಾನ ಮತ್ತು ಗಣಿತ ಕುರಿತು ಔಪಚಾರಿಕ ಶಿಕ್ಷಣ ಪಡೆಯಲು ಹತ್ತಿರದ ಶಾಲೆಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕು ಎಂಬ ನಿಯಮವಿದೆ. ಹಾಗಾಗಿ ಆ ವಿಷಯಗಳ ಮಕ್ಕಳಿಗೆ ಬೋಧನೆ ದೊರೆಯುವಂತೆ ಮಾಡಬೇಕು ಎಂದು ಪಾಲಕರು ಒತ್ತಾಯಿಸಿದ್ದರು ಎಂದು ಅವರು ತಿಳಿಸಿದರು. 

ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಮದ್ರಸಾಗಳಲ್ಲಿ ‘ಶಿಕ್ಷಣ ಹಕ್ಕು ಕಾಯ್ದೆ’  ಪ್ರಕಾರ ಸಿಗಬೇಕಾದ ಶಿಕ್ಷಣ ಸಿಗುತ್ತಿದೆಯೇ? ಇಲ್ಲವಾದರೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ? ಎಂಬ ಕುರಿತು ಮದರಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್.ರಾಮಚಂದ್ರನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆಗೆಂದು ಮದ್ರಸಾಗಳಿಗೆ ತೆರಳಿದಾಗ ಸಹಕರಿಸುವುದಿಲ್ಲ ಎಂಬ ದೂರುಗಳು ಇಲಾಖೆಗೆ ಬಂದಿವೆ. ಹೀಗಾಗಿ, ಕೆಲವು ಮದ್ರಸಾಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸ್ಥಿತಿ-ಗತಿ ಬಗ್ಗೆ ಮಾಹಿತಿ ತೆಗೆದುಕೊಂಡ ನಂತರ ಶಿಕ್ಷಣ ತಜ್ಞರು, ಮದ್ರಸಾ ನಡೆಸುತ್ತಿರುವವರ ಜೊತೆ ಸಭೆ ನಡೆಸಲಾಗುತ್ತದೆ. ಆರ್‍ಟಿಇ ಪ್ರಕಾರ, ಎಲ್ಲ ಮಕ್ಕಳಿಗೆ ಗುಣಮಟ್ಟದ ಔಪಚಾರಿಕ ಶಿಕ್ಷಣ ನೀಡಬೇಕಾದ ಜವಾಬ್ದಾರಿ ಸರಕಾರದ ಮೇಲಿದ್ದು, ಅದನ್ನು ನಿರ್ವಹಿಸಲು ಪ್ರಯತ್ನಿಸಲಾಗುತ್ತದೆ. ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ಸರಕಾರದ ಆಶಯವಾಗಿದೆ.

-ಬಿ.ಸಿ. ನಾಗೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ

'‘ಧಾರ್ಮಿಕ ಶಿಕ್ಷಣಕ್ಕೆ ಸರಕಾರದ ಹಸ್ತಕ್ಷೇಪ ಅಸಂವಿಧಾನಿಕ’'

ರಾಜ್ಯದಲ್ಲಿ ಮುಸ್ಲಿಮ್ ಧಾರ್ಮಿಕ ಕೇಂದ್ರಗಳ ಮೇಲೆ ರಾಜ್ಯ ಸರಕಾರ ಹಸ್ತಕ್ಷೇಪ ಮಾಡಲು ಹೊರಟಿರುವುದು ಅಸಂವಿಧಾನಿಕವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದ್ರಸಾ ಶಿಕ್ಷಣಕ್ಕೆ ಸರಕಾರದ ಅಧೀನದಲ್ಲಿ ಮಂಡಳಿ ರೂಪಿಸಲು ಮುಂದಾಗಿದ್ದು ಅದರ ಮುಖಾಂತರ ಧಾರ್ಮಿಕ ಶಿಕ್ಷಣದಲ್ಲಿ ಹಸ್ತಕ್ಷೇಪ ನಡೆಸಿ ಆರೆಸೆಸ್ಸ್ ಗುಪ್ತ ಅಜೆಂಡಾಗಳನ್ನು ಸರಕಾರ ಮದ್ರಸಾ ವ್ಯವಸ್ಥೆಯಲ್ಲಿ ಅಳವಡಿಸಲು ನಡೆಸುತ್ತಿರುವ ಪ್ರಯತ್ನವು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಅವರು ಹೇಳಿದ್ದಾರೆ. 

ಅಲ್ಪಸಂಖ್ಯಾತ ಧಾರ್ಮಿಕ ಶಿಕ್ಷಣ ವ್ಯವಸ್ಥೆಯ ಮೇಲೆ ಬಿಜೆಪಿ ಸರಕಾರದ ಕಾನೂನು ಬಾಹಿರವಾದ ಹಸ್ತಕ್ಷೇಪವು ಸಂವಿಧಾನದ 29 ಮತ್ತು 30ನೇ ಪರಿಚ್ಛೇದದ ನೇರ ಉಲ್ಲಂಘನೆಯಾಗಿದ್ದು, ಸರಕಾರ ಇಂತಹ ಮಂಡಳಿ ರೂಪಿಸುವುದು ಅಸಂವಿಧಾನಿಕ ಎಂದು ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿ, ಅಭಿವೃದ್ಧಿಪಡಿಸುವುದು ಸಂವಿಧಾನದ ಪ್ರತಿಪಾದನೆಯಾಗಿದೆ. ಆದರೆ ಸಂವಿಧಾನಕ್ಕೆ ಬೆಲೆ ಕೊಡದೆ ಸಂಘದ ಹಿತಾಸಕ್ತಿಗೋಸ್ಕರ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಸರ್ವಾಧಿಕಾರ ಧೋರಣೆಯ ಅನಾವರಣವಾಗಿದೆ. ಇಂತಹ ಮಂಡಳಿಗೆ ಯಾವತ್ತೂ ಮದ್ರಸಾ ಕಮಿಟಿಗಳು ಒಪ್ಪಿಗೆ ನೀಡದೆ ಈ ಆರೆಸೆಸ್ಸ್ ಪ್ರಾಯೋಜಿತ ಗುಪ್ತ ಅಜೆಂಡಾಗಳನ್ನು ಸೋಲಿಸಬೇಕೆಂದು ಅನೀಸ್ ಕುಂಬ್ರ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News