ಸಂತೋಷ್ ಸಾವಿನ ಪ್ರಕರಣ | ಈಶ್ವರಪ್ಪ ಪರ 'ಬಿ' ರಿಪೋರ್ಟ್: ದಾಖಲೆ ಸಲ್ಲಿಸಲು ಕೋರ್ಟ್ ನಿರ್ದೇಶನ

Update: 2022-08-24 15:57 GMT

ಬೆಂಗಳೂರು, ಆ.24: ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K. S. Eshwarappa) ಪರ 'ಬಿ' ರಿಪೋರ್ಟ್ ಸಲ್ಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿನ್ನೆಲೆ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಉಡುಪಿ ಪೊಲೀಸರಿಗೆ ಸೆ.17ರೊಳಗೆ ಸಂತೋಷ್ ಸಾವು ಪ್ರಕರಣ ಸಂಬಂಧಿಸಿದಂತೆ ಎಲ್ಲ ದಾಖಲಾತಿಗಳನ್ನು ಒದಗಿಸುವಂತೆ ನಿರ್ದೇಶಿಸಿದೆ.

ಉಡುಪಿ ಪೊಲೀಸರು ನಡೆಸಿದ ತನಿಖೆ ನ್ಯಾಯಯುತವಾಗಿಲ್ಲ. ಪೂರ್ವಾಗ್ರಹ ಪೀಡಿತರಾಗಿ ತನಿಖೆ ನಡೆಸಿದ್ದಾರೆ. ಪಾರದರ್ಶಕ ತನಿಖೆಗಾಗಿ ಸಿಬಿಐಗೆ ಪ್ರಕರಣವನ್ನು ಒಪ್ಪಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಮೃತ ಸಂತೋಷ್ ಸಹೋದರ ಪ್ರಶಾಂತ್ ಅವರು ಮಂಗಳವಾರ ತಕರಾರು ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸುವಂತೆ ನಿರ್ದೇಶಿಸಿದೆ. 

ದೂರುದಾರರ ಪರ ವಕೀಲ ಕೆಬಿಎನ್ ಸ್ವಾಮಿ ವಾದ ಮಂಡಿಸಿ, ದೂರುದಾರರ ಸಹೋದರನ ಸಾವಿಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು ಸಲ್ಲಿಸಿದ ಅಂತಿಮ ವರದಿಯಲ್ಲಿ ಸಮಗ್ರವಾಗಿ ಯಾವುದೇ ದಾಖಲಾತಿ ಒದಗಿಸಿಲ್ಲ. ಹೀಗಾಗಿ, ತನಿಖಾಧಿಕಾರಿಗಳಿಗೆ ದಾಖಲಾತಿ ನೀಡುವಂತೆ ಸೂಚಿಸಬೇಕೆಂದು ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಬಿ ರಿಪೋರ್ಟ್ ನಲ್ಲಿ ಇಲ್ಲದಿರುವ ಅಂಶಗಳ ಬಗ್ಗೆ ಸಂಪೂರ್ಣವಾಗಿ ಸೆ.17ರೊಳಗೆ ದಾಖಲೆಗಳನ್ನು ಸಲ್ಲಿಸಬೇಕೆಂದು ಉಡುಪಿ ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಪ್ರಕರಣವೇನು?: ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ 4 ಕೋಟಿ ವೆಚ್ಚದ ಕಾಮಗಾರಿ ಬಿಲ್ ಮಂಜೂರು ಮಾಡಲು ಈಶ್ವರಪ್ಪ 40 ಪರ್ಸೆಂಟ್ ಕಮಿಷನ್‌ಗೆ ಒತ್ತಾಯಿಸಿದ್ದರು ಎಂದು ಆರೋಪಿಸಿ ಎ.11ರಂದು ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೃತ ಸಂತೋಷ್ ಪಾಟೀಲ ಸಂಬಂಧಿಗಳು ನೀಡಿದ ದೂರಿನಂತೆ ಸೆಕ್ಷನ್ 306, 334 ಅಡಿ ಈಶ್ವರಪ್ಪ (ಎ 1), ಬಸವರಾಜ್ (ಎ 2), ರಮೇಶ್ (ಎ 3) ವಿರುದ್ಧ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಕ್ಷೇಪಣಾ ಅರ್ಜಿ ಸಲ್ಲಿಕೆ: ವಕೀಲ ಕೆ ಬಿ ಎನ್ ಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋರ್ಟ್ಗೆ ಸಲ್ಲಿಸಿರುವ ಅಂತಿಮ ವರದಿ ಅಪೂರ್ಣವಾಗಿದೆ. ಈ ಸಂಬಂಧ ದಾಖಲಾತಿ ಒದಗಿಸುವಂತೆ ಸೂಚಿಸುವಂತೆ ಕೋರ್ಟ್ಗೆ ಆ.23ರಂದು ಮನವಿ ಮಾಡಿಕೊಂಡಿದ್ದೆವು. ಇದರಂತೆ ನ್ಯಾಯಾಲಯ ಬುಧವಾರ ಎಲ್ಲ ದಾಖಲಾತಿ ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದಾಖಲಾತಿ ಪರಿಶೀಲಿಸಿದ ಬಳಿಕ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗುವುದು ಎಂದರು.

ನನ್ನ ತಮ್ಮ ಸಂತೋಷ್‌ಗೆ ಅನ್ಯಾಯ: ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಮಾತನಾಡಿ, 'ಉಡುಪಿ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ಒಪ್ಪಿಕೊಂಡಿಲ್ಲ. ಆರೋಪಿಗಳಿಗೆ ಬೇಕಾದ ಹಾಗೆ ಪೊಲೀಸರು ತನಿಖೆ ನಡೆಸಿ ನನ್ನ ತಮ್ಮನಿಗೆ ಅನ್ಯಾಯ ಮಾಡಿದ್ದಾರೆ. ಇಲ್ಲಿತನಕ ಎಷ್ಟು ಸಾಕ್ಷಿಗಳಿವೆ, ಅವುಗಳನ್ನು ಕೋರ್ಟ್ಗೆ ಹಾಜರು ಪಡಿಸಲು ಕೋರ್ಟ್ ಹೇಳಿದೆ. ನನ್ನ ತಮ್ಮನ ಚಲನವಲನಗಳ ಬಗ್ಗೆ ಕೋರ್ಟ್ ಮಾಹಿತಿ ಕೇಳಿದೆ. ಆತನ ಮೊಬೈಲ್‌ನಿಂದ ಡಾಟಾ, ಕರೆ ಮಾಹಿತಿ, ಸಿಸಿಟಿವಿ ಸೇರಿದಂತೆ ಸೆ.17 ರೊಳಗೆ ಎಲ್ಲ ಸಾಕ್ಷ್ಯ ಸಲ್ಲಿಕೆಗೆ ಸೂಚನೆ ನೀಡಿದೆ' ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News