×
Ad

ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪಗೆ ಅನಾಮಧೇಯ ಬೆದರಿಕೆ ಪತ್ರ: ದೂರು ದಾಖಲು

Update: 2022-08-24 23:01 IST

ಶಿವಮೊಗ್ಗ, ಆ.24: ಮಾಜಿ ಸಚಿವ, ಶಾಸಕ ಕೆ.ಎಸ್‌ ಈಶ್ವರಪ್ಪ ಅವರಿಗೆ ಅನಾಮಧೇಯ ಬೆದರಿಕೆ ಪತ್ರವೊಂದು ಶಿವಮೊಗ್ಗದ ಮಲ್ಲೇಶ್ವರ ನಗರದ ಮುಖ್ಯ ರಸ್ತೆಯಲ್ಲಿರುವ ಅವರ ಮನೆಗೆ ಬಂದಿರುವುದಾಗಿ ವರದಿಯಾಗಿದೆ. 

ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕರ ಆಪ್ತ ಸಹಾಯಕರು ದೂರು ನೀಡಿದ್ದಾರೆ.

ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಬೆಳವಣಿಗೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ, ಕರ್ನಾಟಕದಲ್ಲಿ ಹಿಂದೂ ಸಮಾಜ ಮೇಲೆದ್ದರೆ ಮುಸ್ಲಿಮ್ ಗೂಂಡಾಗಳು ಉಳಿಯುವ ಪ್ರಶ್ನೆಯೇ ಇಲ್ಲ. ನಾನು ಎಲ್ಲ ಮುಸ್ಲಿಮರೂ ಗೂಂಡಾಗಳು ಎಂದು ಹೇಳುವುದಿಲ್ಲ. ಆದರೆ ಯಾರೋ ನಾಲ್ಕೈದು ದುಷ್ಕರ್ಮಿಗಳು ಮಾಡುತ್ತಿರುವ ಕೆಲಸವನ್ನು ಸಮಾಜ ಖಂಡಿಸಬೇಕಿತ್ತು. ಆ ಕೆಲಸವನ್ನು ಮುಸ್ಲಿಮ್ ಸಮಾಜದ ಪ್ರಮುಖರು ಮಾಡಬೇಕು' ಎಂದು ಹೇಳಿದ್ದರು. ಇದೀಗ ಮುಸ್ಲಿಂ ಗೂಂಡಾಗಳು ಎಂಬ ಪದ ಬಳಸಿದ್ದಕ್ಕೆ ಅನಾಮಧೇಯ ಬೆದರಿಕೆ ಪತ್ರ ಕೆಎಸ್‌ ಈಶ್ವರಪ್ಪ ಮನೆಗೆ ಬಂದಿದೆ ಎಂದು ತಿಳಿದು ಬಂದಿದೆ. 

ಸದ್ಯ ಪತ್ರ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಇದನ್ನು ಪರಿಶೀಲಿಸಿ ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬೆದರಿಕೆ ಪತ್ರ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಕೆಎಸ್ ಈಶ್ವರಪ್ಪ, 'ನಾನು ಕೊಲೆ, ದರೋಡೆ ಮಾಡೋ ಮುಸಲ್ಮಾನರಿಗೆ ಮಾತ್ರ ಗೂಂಡಾ ಎಂದು ಕರೆಯುತ್ತೇನೆ, ಎಲ್ಲಾ ಮುಸಲ್ಮಾರಿಗೆ ನಾನು ಹಾಗೆ ಕರೆದಿಲ್ಲ. ಹಿಂದೂ ಹರ್ಷ, ಪ್ರವೀಣ್ ನೆಟ್ಟಾರ್ ಕೊಲೆ ಮಾಡಿದವರು ಹೇಡಿಗಳಂತೆ ಕೃತ್ಯ ಎಸಗಿದ್ದಾರೆ. ಮೊನ್ನೆ ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿದು ಹೋಗಿದ್ದೂ ಹೇಡಿತನದಿಂದ. ಎದುರು ಬಂದರೆ ಬೇರೆ ತರಹ, ಈ ಪತ್ರವೂ ಹೇಡಿತನದ್ದು, ನಾನು ಹದರೋದಿಲ್ಲ. ಯಾವ ಮುಸ್ಲಿಮ್ ಗೂಂಡಾ ಪ್ರವೃತ್ತಿ ಮಾಡ್ತಾರೋ ಅಂಥವರಿಗೆ ಗೂಂಡಾ ಅಂತ ಕರೆಯದೇ, ಒಳ್ಳೇಯವರು ಎನ್ನಬೇಕಾ? ಯಾರೋ ಹೇಡಿ ಗೂಂಡಾ ಪ್ರವೃತ್ತಿಯವನೇ ಇರಬೇಕು' ಎಂದು ಈಶ್ವರಪ್ಪ ತಿಳಿಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News