×
Ad

ಪಂಚಮಸಾಲಿ ಮೀಸಲಾತಿ: ಸಮಿತಿಗೆ ಹೈಕೋರ್ಟ್ ತುರ್ತು ನೋಟಿಸ್

Update: 2022-08-24 23:41 IST

ಬೆಂಗಳೂರು, ಆ.24: ಲಿಂಗಾಯತ ಪಂಚಮಸಾಲಿ ಉಪ ಪಂಗಡವನ್ನು 2-ಎಗೆ ಸೇರಿಸುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಮೀಸಲಾತಿ ಪರಿಶೀಲನೆಯ ಉನ್ನತ ಮಟ್ಟದ ಸಮಿತಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೆಂಕಟರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸಮಿತಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಜತೆಗೆ ರಾಜ್ಯ ಸರಕಾರಕ್ಕೂ ನೋಟಿಸ್ ಜಾರಿಗೊಳಿಸಿದೆ. 

ವಕೀಲರ ವಾದ ವಾದ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ಅವರ ಹೆಸರಿನಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಸಾಮಾನ್ಯವಾಗಿ, ನ್ಯಾಯಮೂರ್ತಿಗಳ ಹೆಸರು ಸೇರಿಸುವುದಿಲ್ಲ. ಹೀಗಾಗಿ, ಜಡ್ಜ್ಗಳ ಹೆಸರಿನ ಬದಲಿಗೆ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರು ಎಂದು ಪ್ರತಿವಾದಿಯನ್ನಾಗಿ ಮಾಡುವಂತೆ ಅರ್ಜಿದಾರರಿಗೆ ನ್ಯಾಯಪೀಠ ಸೂಚಿಸಿತು. ಅದಕ್ಕೆ ಅರ್ಜಿದಾರರ ಪರ ವಕೀಲರು ಸಹಮತ ವ್ಯಕ್ತಪಡಿಸಿದರು.

ಅರ್ಜಿಯ ಮುಂದಿನ ಆದೇಶದವರಿಗೆ ಪ್ರಕರಣದಲ್ಲಿ ಮುಂದುವರಿಯದಂತೆ ಉನ್ನತ ಮಟ್ಟದ ಸಮಿತಿಗೆ ಸೂಚಿಸಿ ಆ.12ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ನ್ಯಾಯಪೀಠ ವಿಸ್ತರಿಸಿತು.

ಏನಿದು ಪ್ರಕರಣ?: ಪಂಚಮಸಾಲಿ ಸಮುದಾಯವನ್ನು 3ಬಿ ವಿಭಾಗದಿಂದ 2ಎ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸೇರಿದಂತೆ ಇತರೆ ಸಮಯದಾಯಗಳ ಮೀಸಲಾತಿ ಬೇಡಿಕೆ ಪರಿಶೀಲಿಸಿ ವರದಿ ಸಲ್ಲಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ರಾಜ್ಯ ಸರಕಾರವು 2021ರ ಜು. 1ರಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿರುವ ಅರ್ಜಿದಾರರು, ಕಾನೂನಿಗೆ ವಿರುದ್ಧವಾಗಿ ಉನ್ನತಮಟ್ಟದ ಸಮಿತಿ ರಚಿಸಿ ರಾಜ್ಯ ಸರಕಾರ ಆದೇಶಿಸಿದೆ ಎಂದು ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News