ಬಾಗಲಕೋಟೆ; ಪುರಸಭೆ ಅಧ್ಯಕ್ಷರ‌ ಪದಗ್ರಹಣ ವೇಳೆ ಕುರಾನ್ ಪಠಿಸಿದ ಆರೋಪ: ಸಭಾಂಗಣಕ್ಕೆ ಗೋಮೂತ್ರ ಸಿಂಪಡಿಸಿದ BJP ಸದಸ್ಯರು

Update: 2022-08-25 07:23 GMT

ಬಾಗಲಕೋಟೆ, (Bagalkote): ಜಿಲ್ಲೆಯ ಹುನಗುಂದ ಪುರಸಭೆ ಅಧ್ಯಕ್ಷರ‌ ಅಧಿಕಾರ‌ ಸ್ವೀಕಾರ ಸಂದರ್ಭದಲ್ಲಿ ಕುರಾನ್ ಪಠಿಸಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಪುರಸಭೆಯ ಸಭಾಂಗಣದಲ್ಲಿ ಗೋಮೂತ್ರ ಸಿಂಪಡಿಸಿ, ಗೋಪೂಜೆ ಮಾಡಿದ್ದಾರೆ.

ಜೆಡಿಎಸ್ ನಿಂದ ಪುರಸಭೆಗೆ ಆಯ್ಕೆಗೊಂಡಿದ್ದ ಪರ್ವೇಝ್ ಖಾಝಿ ಮುಹಮ್ಮದ್ ಜಮೀಲ್ ಇತ್ತೀಚೆಗೆ ಕಾಂಗ್ರೆಸ್ ಸೇರಿ  ಎರಡನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಬುಧವಾರ ಅವರ ಪದಗ್ರಹಣ ಸಂದರ್ಭದಲ್ಲಿ ಕುರಾನ್ ಪಠಣ ಮಾಡಲಾಗಿದೆ ಎಂದು  ಆರೋಪಿಸಿರುವ ಬಿಜೆಪಿ ಸದಸ್ಯರು ಪದಗ್ರಹಣ ಕಾರ್ಯಕ್ರಮದ ಬಳಿಕ ಕೇಸರಿ ಶಾಲಿನೊಂದಿಗೆ ಸಭಾಂಗಣಕ್ಕೆ ಆಗಮಿಸಿ ಗೋಮೂತ್ರ ಸಿಂಪಡಿಸಿ, ಗೋ ಪೂಜೆ ಮಾಡಿದ್ದಾರೆ. 

ಬುಧವಾರ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಪುರಸಭೆಯ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆದರೆ, ಬಿಜೆಪಿ ಸದಸ್ಯರು ಸಭಾಂಗಣಕ್ಕೆ ಬರದೇ ಸಭೆಗೆ ಗೈರಾಗಿದ್ದರು. 

ಈ ಕುರಿತು 'ವಾರ್ತಾ ಭಾರತಿ'ಗೆ ಪ್ರತಿಕ್ರಿಯಿಸಿದ ಪುರಸಭೆಯ ಅಧ್ಯಕ್ಷ  ಪರ್ವೇಝ್ ಖಾಝಿ,  'ಅಧಿಕಾರ‌ ಸ್ವೀಕಾರ ಸಂದರ್ಭದಲ್ಲಿ ಊರಿನ ಹಿರಿಯರು ಹಾಗೂ ಹಿತೈಷಿಗಳು ಆಗಮಿಸಿ ಶುಭ ಹಾರೈಸಿ ದುಆ (ಪ್ರಾರ್ಥನೆ) ಮಾಡಿದ್ದಾರೆ. ಸರ್ವ ಧರ್ಮೀಯರಿಗೂ ಒಳಿತಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಆದರೆ, ಬಿಜೆಪಿಯ ಸದಸ್ಯರು ಅದನ್ನೇ ಕುರಾನ್ ಪಠಿಸಿದ್ದಾರೆಂದು ಆರೋಪಿಸಿ ಗೋಮೂತ್ರ ಸಿಂಪಡಿಸಿ, ಗೋ ಪೂಜೆ ಮಾಡಿದ್ದಾರೆ. ಗೋ ಪೂಜೆಗೆ ನಮ್ಮಿಂದ ಯಾವುದೇ  ಆಕ್ಷೇಪ ಇಲ್ಲ. ಆದರೆ, ಈ ಘಟನೆಯಿಂದ ಮನಸ್ಸಿಗೆ ನೋವಾಗಿದೆ' ಎಂದು ತಿಳಿಸಿದರು. 

ಇದನ್ನೂ ಓದಿ:  ಬೆಳಗಾವಿ: ಚಿರತೆ ಸೆರೆಗಾಗಿ ಆನೆಗಳಿಂದ ಮುಂದುವರಿದ ಕಾರ್ಯಾಚರಣೆ; 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News