'ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ'ದ ಅಧ್ಯಕ್ಷ ಸ್ಥಾನ ನಿರಾಕರಿಸಿದ ನರೇಂದ್ರ ರೈ ದೇರ್ಲ

Update: 2022-08-25 10:00 GMT
ನರೇಂದ್ರ ರೈ ದೇರ್ಲ

ಬೆಂಗಳೂರು, ಆ. 25:  ವಿವಿಧ ಟ್ರಸ್ಟ್, ಪ್ರತಿಷ್ಠಾನಗಳಿಗೆ ಹೊಸ ಅಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಸರ್ಕಾರ ಬುಧವಾರ ನೇಮಿಸಿದ್ದು, 'ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ'ದ ಅಧ್ಯಕ್ಷ ಸ್ಥಾನವನ್ನು ಲೇಖಕ, ಅಂಕಣಕಾರ ನರೇಂದ್ರ ರೈ ದೇರ್ಲ ಅವರು ನಿರಾಕರಿಸಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ನರೇಂದ್ರ ರೈ ದೇರ್ಲ, 'ತೇಜಸ್ವಿ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಿರುವ ಈ ಸರಕಾರಕ್ಕೆ ನನ್ನ ಧನ್ಯವಾದಗಳು .ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ' ಎಂದು ತಿಳಿಸಿದ್ದಾರೆ.  

ಇದನ್ನೂ ಓದಿ: ಬೇಂದ್ರೆ, ಮಾಸ್ತಿ, ಕಾರಂತ, ತೇಜಸ್ವಿ ಟ್ರಸ್ಟ್/ಪ್ರತಿಷ್ಠಾನಗಳ ಅಧ್ಯಕ್ಷ-ಸದಸ್ಯರ ನೇಮಕ ಆದೇಶ

ನರೇಂದ್ರ ರೈ ದೇರ್ಲ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ...

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ'ದ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಸುದ್ದಿ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ. ಈ ಕಾರಣಕ್ಕಾಗಿಯೇ ಸರಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳಿಸಿದ್ದಾರೆ.

ಈ ಕುರಿತು ಘನ ಸರಕಾರಕ್ಕೂ ನನ್ನ ಧನ್ಯವಾದಗಳು .ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ .ಈ ಕುರಿತು ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ .ಅಂತಹ ಪತ್ರ- ಆದೇಶ ನನಗೆ ಬಂದಿಲ್ಲ. ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ.

ದಯವಿಟ್ಟ ಯಾರೂ ಕೂಡಾ ಇದನ್ನು ನನ್ನ ಅಹಂ, ಉದ್ದಟತನವೆಂದು ಭಾವಿಸಬಾರದು .ಇಂಥ ಸರಳ ಸೌಜನ್ಯ- ನಿರಾಕರಣೆಗೆ ನನಗೆ ತೇಜಸ್ವಿ ಅವರೇ ಸ್ಪೂರ್ತಿ.  ಸರಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿಯ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ. ಆದರೆ ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿಯನ್ನು ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ .ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ... ಎಂದು ನರೇಂದ್ರ ರೈ ದೇರ್ಲ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

------------------------------------------------

ಮೃತರಿಗೂ ಪ್ರತಿಷ್ಠಾನದಲ್ಲಿ ಸ್ಥಾನ! 

‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಲೇಖಕ ನರೇಂದ್ರ ರೈ ದೇರ್ಲ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು, ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಸದಸ್ಯರ(ಮಹಿಳೆ)ನ್ನಾಗಿ ನೇಮಿಸಲಾಗಿದೆ. ಆದರೆ, ಅವರು 2021ರ ಡಿಸೆಂಬರ್ 14ರಂದು ನಿಧನರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿದೆ.

ಪ್ರತಿಷ್ಠಾನಕ್ಕೆ ಪ್ರಭುಲಿಂಗ ಶಾಸ್ತ್ರಿ, ದೀಪಕ್ ದೊಡ್ಡಯ್ಯ, ಶಿವಾನಂದ ಕಳವೆ, ವಿನೋದ್ ಕುಮಾರ್ ನಾಯ್ಕ್, ಲಕ್ಷ್ಮಿ ನಾರಾಯಣ ಕಜಗದ್ದೆ, ಮಾರ್ಷಲ್ ಶರಾಮ್ ಹಾಗೂ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಸದಸ್ಯರನ್ನಾಗಿ ನೇಮಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರಿನ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News