ನನ್ನ ವಿರುದ್ಧ ಸುಳ್ಳು ಆರೋಪ, ಗುತ್ತಿಗೆದಾರರ ಸಂಘದ ವಿರುದ್ಧ 50 ಕೋಟಿ ರೂ.ಮಾನನಷ್ಟ ಮೊಕದ್ದಮೆ: ಸಚಿವ ಮುನಿರತ್ನ

Update: 2022-08-25 12:03 GMT

ಬೆಂಗಳೂರು, ಆ. 25: ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದು. ಯಾವುದೇ ರೀತಿಯ ದಾಖಲೆ ಕೊಡದೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದೀಗ ವಿಪಕ್ಷ ನಾಯಕರನ್ನು ಭೇಟಿ ಮಾಡಿ ಹೇಳಿಕೆ ನೀಡಿರುವುದು ಸರಿಯಲ್ಲ' ಎಂದು ತೋಟಗಾರಿಕೆ ಸಚಿವ ಮುನಿರತ್ನ ಆಕ್ಷೇಪಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೋಲಾರದಲ್ಲಿ ಪ್ರಗತಿ ಪರಿಶೀಲನೆ ಸಭೆ ಮಾಡಿ ರಸ್ತೆ ಹಾಳಾಗಿರುವ ಬಗ್ಗೆ ನಾನೇ ರಸ್ತೆ ವೀಕ್ಷಣೆ ಮಾಡುತ್ತೇನೆಂದು ಹೇಳಿದ್ದೆ. ರಸ್ತೆ ಗುಣಮಟ್ಟ ಪರಿಶೀಲನೆ ಮಾಡುವ ಯಂತ್ರ ನಮ್ಮ ಬಳಿ ಇರಬೇಕೆಂದು ಎಲ್ಲ ಅಧಿಕಾರಿಗಳಿಗೆ ಹೇಳಿದ್ದೆ. ಅಷ್ಟರಲ್ಲಿ ಗುಣಮಟ್ಟ ಆಮೇಲೆ ಪರಿಶೀಲನೆ ಮಾಡಿ ಎಂದು ಹೇಳಿ ಪ್ರತಿಭಟನೆ ಮಾಡಿದರು. ಗುತ್ತಿಗೆದಾರ ಸಂಘವನ್ನು ನಾನು 40 ವರ್ಷಗಳಿಂದ ನೋಡುತ್ತಿದ್ದೇನೆ' ಎಂದು ಹೇಳಿದರು.

‘ತೇಜೋವಧೆ ಮಾಡಲು ಆರೋಪ ಮಾಡುವುದು ಸರಿಯಲ್ಲ. ಭ್ರಷ್ಟಾಚಾರದ ಬಗ್ಗೆ ಯಾವುದೇ ದಾಖಲೆ ಇದ್ದರೆ ಕೊಡಬೇಕು. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ನಾನು ಗುತ್ತಿಗೆದಾರರ ಸಂಘದ ವಿರುದ್ಧ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಿದ್ದೇನೆ. ಎಲ್ಲ ಸಚಿವರು ಭ್ರಷ್ಟರು ಎಂದು ಕೆಂಪಣ್ಣ ಆರೋಪಿಸಿದ್ದು, ಈ ಕುರಿತು 7 ದಿನಗಳ ಒಳಗೆ ಲೋಕಾಯುಕ್ತಕ್ಕೆ ದೂರು ನೀಡಬೇಕು, ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು' ಎಂದು ಮುನಿರತ್ನ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News