ಕಮಿಷನ್ ಆರೋಪ | ಮುನಿರತ್ನ ಹೋರಾಟ ಮಾಡಲಿದ್ದಾರೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಆ. 25: ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಒಂದು ವರ್ಷದಿಂದ ಸರಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಲೇ ಇದ್ದಾರೆ. ಇಷ್ಟು ದಿನ ಯಾವುದೇ ನಿಖರವಾದ ಆರೋಪ ಮಾಡಿರಲಿಲ್ಲ. ಇದೀಗ ಸಚಿವ ಮುನಿರತ್ನ ಮೇಲೆ ಆಪಾದನೆ ಮಾಡಿದ್ದಾರೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಸಚಿವ ಮುನಿರತ್ನ ಅವರೇ, ‘ಕೆಂಪಣ್ಣ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ' ಎಂದು ಹೇಳಿದ್ದಾರೆ. ಅವರು ಮುಂದಿನ ಹೋರಾಟ ಮಾಡುತ್ತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರೇನು ಸತ್ಯಹರಿಶ್ಚಂದ್ರರೇ?' ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.
‘ಪ್ರತಿಪಕ್ಷ ನಾಯಕರೇ ಈ ಹಿಂದೆಯೂ ಆಮೆ ವೇಗದಲ್ಲಿದ್ದ ಭ್ರಷ್ಟಾಚಾರ ಇದೀಗ ಶರವೇಗ ಪಡೆದುಕೊಂಡಿದೆ ಎಂದು ಹೇಳುವ ಮೂಲಕ ಅವರೇ ಭ್ರಷ್ಟಾಚಾರ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಹಾಗಾದರೆ ಇಷ್ಟು ದಿನ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಇದ್ದರೇ? ಸುಖಾಸುಮ್ಮನೆ ರಾಜಕೀಯಕ್ಕಾಗಿ ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆಯೇ ಕೆಂಪಣ್ಣ ಅವರ ಸಲಹೆ ಪಡೆದು ಕ್ರಮ ವಹಿಸಲಾಗಿದೆ' ಎಂದು ವಿವರಿಸಿದರು.