ಕೊಳ್ಳೇಗಾಲ | ಅರಣ್ಯ ಇಲಾಖೆಯಿಂದ ಭೂಮಿ ವಾಪಸ್ ಗೆ ಆಗ್ರಹ: 25ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ
ಕೊಳ್ಳೇಗಾಲ. ಆ.25. ವಶಪಡಿಸಿಕೊಂಡಿರುವ ಭೂಮಿಯನ್ನು ಅರಣ್ಯ ಇಲಾಖೆಯವರು ವಾಪಸ್ ನೀಡಬೇಕೆಂದು ಆಗ್ರಹಿಸಿ ತಾಲೂಕಿನ ಬೂದಗಟ್ಟೆ ದೊಡ್ಡಿ ಗ್ರಾಮದ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ 25 ನೇ ದಿನವೂ ಕೂಡ ಮುಂದುವರೆದಿದೆ.
ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಕಚೇರಿ ಎದುರು ನಿರಂತರ ಧರಣಿ ನಡೆಸುತ್ತಿರುವ ಗ್ರಾಮಸ್ಥರು ಹಾಗೂ ರೈತರು ಎದೆ ಮೇಲೆ ಕಲ್ಲು ಚಪ್ಪಡಿಯನ್ನು ಇಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು.
ಜಾಗೇರಿ ಮೀಸಲು ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆಯು ಬೂದಗಟ್ಟೆದೊಡ್ಡಿ ಗ್ರಾಮದ ರೈತರು ಹಲವಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದ ಭೂಮಿಯನ್ನು ವಶಪಡಿಸಿಕೊಂಡಿರುವುದು ಸರಿಯಲ್ಲ. ವ್ಯವಸಾಯ ಭೂಮಿಯನ್ನು ರೈತರಿಗೆ ಬಿಟ್ಟು ಇತರೆ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಿ ಎಂದು ಆಗ್ರಹಿಸಿದರು.
25 ದಿನಗಳ ಹೋರಾಟದಲ್ಲಿ 13 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದೇವೆ. ಕಳೆದ ಐದು ದಿನಗಳ ಹಿಂದೆ ಉಸ್ತುವಾರಿ ಸಚಿವರ ಭರವಸೆಗೆ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟು ಧರಣಿ ನಡೆಸುತ್ತಿದ್ದೇವೆ ಎಂದರು.
ಭೂಮಿಯನ್ನು ರೈತರಿಗೆ ವಾಪಸ್ಸು ನೀಡುವ ತನಕ ಹೋರಾಟ ಮುಂದುವರೆಯಲಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಧರಣಿಯನ್ನು ಲಘುವಾಗಿ ಪರಿಗಣಿಸದೆ ಬೇಗ ಸಮಸ್ಯೆ ಇತ್ಯರ್ಥ ಮಾಡಬೇಕು. ಇಲ್ಲದಿದ್ದರೆ ಹೋರಾಟ ಬೇರೆ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಧರಣಿಯಲ್ಲಿ ರೈತ ಮುಖಂಡರಾದ ಶೈಲೇಂದ್ರ, ಮಧುವನಹಳ್ಳಿ ಬಸವರಾಜು, ಗುರುಮಲ್ಲಯ್ಯ, ಲೂಯಿಸ್, ಗ್ರಾಮಸ್ಥರು ಚೌಡಭೋವಿ, ಚಂದ್ರಭೋವಿ, ಅಂತೋಣಿ, ಪ್ರಕಾಶ್, ಶಾಂತ ಮೇರಿ, ಲಲಿತಾಬಾಯಿ, ಜಯಾ, ಫಿಲೋಮಿನಾ, ಮಣಿ, ಕುಮಾರ್ ಸೇರಿದಂತೆ ಇನ್ನೀತರರು ಭಾಗವಹಿಸಿದ್ದರು.