ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ಸೈನಿಕರ ಕುಟುಂಬಸ್ಥರಿಗೆ ಸರಕಾರಿ ನೌಕರಿ ನೀಡಲು ಸಂಪುಟ ಒಪ್ಪಿಗೆ
ಬೆಂಗಳೂರು, ಆ. 25: ‘ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ಸೈನಿಕರ ಕುಟುಂಬದ ಸದಸ್ಯರ ಜೀವನ ಭದ್ರತೆ ಕಲ್ಪಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ನೌಕರಿ ನೀಡಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಮಾಡಿದೆ' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಗುರುವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ವಿಧಾನಸೌಧದ 3ನೆ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘75ನೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಘೋಷಣೆ ಮಾಡಿದ್ದರು. ಇದೀಗ ಸಂಪುಟ ಒಪ್ಪಿಗೆ ನೀಡಿದೆ' ಎಂದರು.
‘ರಾಜ್ಯದಲ್ಲಿ ಒಟ್ಟು 400 ಮಂದಿ ಸೈನಿಕರು ಕರ್ತವ್ಯದಲ್ಲಿದ್ದ ವೇಳೆ ಅಸುನೀಗಿದ್ದು, ಆ ಪೈಕಿ 200 ಮಂದಿ ಕುಟುಂಬದ ಸದಸ್ಯರು ಸರಕಾರಿ ನೌಕರಿಗೆ ಅರ್ಹರಿದ್ದು ಅವರಿಗೆ ಸರಕಾರಿ ಉದ್ಯೋಗ ನೀಡಲು ಕ್ರಮ ವಹಿಸಲಾಗುವುದು. ಮೃತ ಸೈನಿಕರಿಗೆ 25 ಲಕ್ಷ ರೂ.ಮೊತ್ತದ ಪರಿಹಾರ ಹಾಗೂ ನಿವೇಶನ ನೀಡುವ ಬದಲಿಗೆ ಅವರ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿಯನ್ನು ನೀಡಲಾಗುವುದು' ಎಂದು ಮಾಧುಸ್ವಾಮಿ ವಿವರ ನೀಡಿದರು.
ಇತರೆ ತೀರ್ಮಾನಗಳು: ಕೆಪಿಎಸ್ಸಿ ನೇಮಕಾತಿಯಲ್ಲಿ ‘ಡಿ' ಗ್ರೂಪ್ ಹುದ್ದೆಗಳಿಗೆ ಇನ್ನು ಮುಂದೆ ಸಂದರ್ಶನ ಇರುವುದಿಲ್ಲ. ಬದಲಾಗಿ ನೇರವಾಗಿ ಪರೀಕ್ಷೆ ಮೂಲಕ ನೇರವಾಗಿ ನೇಮಕ ಮಾಡುವ ಸಂಬಂಧ ತಿದ್ದುಪಡಿ ಮಾಡಲಾಗಿದೆ. ಕಲಾಸಿಪಾಳ್ಯ ಮಾರುಕಟ್ಟೆಗೆ ಬರುವ ಜನ ಸಂದಣಿ ನಿಯಂತ್ರಣ ಮಾಡಲು ಬೆಂಗಳೂರು ಹೊರ ವಲಯದ ಗುಳಿಮಂಗಲ ಸಮೀಪದ ಸಿಂಗೇನ ಅಗ್ರಹಾರದಲ್ಲಿ ಹಣ್ಣಿನ ಮಾರುಕಟ್ಟೆಯ ಬಳಿಯೆ 42 ಎಕರೆ ಪ್ರದೇಶದಲ್ಲಿ 52 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಅದೇ ರೀತಿಯಲ್ಲಿ ಮಾಗಡಿ ಮತ್ತು ಕೋಲಾರ ಭಾಗದಲ್ಲಿಯೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಒಪ್ಪಿಗೆ, ಲೋಕಾಯುಕ್ತದ ನಿವೃತ್ತ ಏಳು ಮಂದಿ ಪಿಪಿಗಳನ್ನು ವರ್ಷದ ಅವಧಿ ಮುಂದುವರಿಸಲು ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ 4,244 ಹೊಸ ಅಂಗನವಾಡಿ ಸ್ಥಾಪನೆಗೆ ಸಂಪುಟ ಸಭೆಯಲ್ಲಿ ಸಮ್ಮತಿಸಿದೆ. ಯೋಜನಾ ಆಯೋಗ ರದ್ದುಗೊಳಿಸಿ ಕೇಂದ್ರ ಸರಕಾರ ನೀತಿ ಆಯೋಗ ರಚನೆ ಮಾಡಿದ್ದು, ಅದೇ ಮಾದರಿಯಲ್ಲಿ ‘ರಾಜ್ಯ ನೀತಿ ಆಯೋಗ ರಚನೆ'ಗೆ ನಿಯಮ ರೂಪಿಸಲು ಒಪ್ಪಿಗೆ ನೀಡಲಾಗಿದೆ.
ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ, ಶಿವಮೊಗ್ಗ, ಭದ್ರಾವತಿಯಲ್ಲಿ ಕುಡಿಯುವ ನೀರು ಯೋಜನೆಗೆ 48 ಕೋಟಿ ರೂ., ಸೇಡಂನಲ್ಲಿ ಎಸ್ಸಿ-ಎಸ್ಟಿ ವರ್ಗದ ಮಕ್ಕಳ ತರಬೇತಿ ಉದ್ದೇಶಕ್ಕಾಗಿ ಕೆಎಸ್ಸಾರ್ಟಿಸಿ ಚಾಲನಾ ಮತ್ತು ಮೆಕ್ಯಾನಿಕಲ್ ತರಬೇತಿ ಕೇಂದ್ರ ಸ್ಥಾಪನೆ, ಸನ್ನಡತೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ್ದ 84 ಕೈದಿಗಳ ಪೈಕಿ ಮೂರು ಮಂದಿಗೆ ಒಪ್ಪಿಗೆ ದೊರಕಿರಲಿಲ್ಲ, ಇದೀಗ ಅವರ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಶ್ರೀನಿವಾಸ ಎಜುಕೇಶನ್ ಟ್ರಸ್ಟ್‍ಗೆ ಶೈಕ್ಷಣಿಕ ಉದ್ದೇಶಕ್ಕಾಗಿ 3 ಎಕರೆ ಜಮೀನು ಮಂಜೂರು, ಉಡುಪಿಯ ಹೆಬ್ರಿ ಮತ್ತು ಕಾರ್ಕಳ ತಾಲೂಕಿನಲ್ಲಿ 69 ಗ್ರಾಮಗಳಿಗೆ ಕುಡಿಯುವ ನೀರಿಗೆ ಜಲ ಜೀವನ ಮಿಷನ್ ಅಡಿಯಲ್ಲಿ 1,600 ಕೋಟಿ ರೂ. ಹಾಗೂ ಗದಗದ ಕಪತ್ತಗುಡ್ಡ ಪ್ರದೇಶವನ್ನು ವನ್ಯಜೀವಿಧಾಮವೆಂದು ಘೋಷಣೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.