ಸಕಲೇಶಪುರದಲ್ಲಿ ದಲಿತ ಯುವಕನಿಗೆ ಹಲ್ಲೆ ಪ್ರಕರಣ: ಆರೋಪಿಗಳ ಗಡಿಪಾರಿಗೆ ವಿವಿಧ ಸಂಘಟನೆಗಳ ಒತ್ತಾಯ

Update: 2022-08-25 18:08 GMT

ಹಾಸನ: 'ಸಮಾಜದಲ್ಲಿ ಶಾಂತಿ ಕದಡಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿರುವ ಬಜರಂಗದಳದ ಕ್ರಿಮಿನಲ್ ಹಿನ್ನೆಲೆಯ ರಘು ಮತ್ತು ಆತನ ಸಹಚರರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು' ಎಂದು ಜಿಲ್ಲೆಯ ದಲಿತ ಮತ್ತು ಜನಪರ ಸಂಘಟನೆಗಳ ಪ್ರಮುಖರು ಒತ್ತಾಯಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ದಸಂಸ ಮುಖಂಡ ಎಸ್. ಎನ್. ಮಲ್ಲಪ್ಪ, 'ಹಿಂದೂ ಧರ್ಮ, ಸಂಸ್ಕೃತಿ ಮತ್ತು ಗೋವುಗಳ ರಕ್ಷಣೆಯ ಹೆಸರಿನಲ್ಲಿ ಸಕಲೇಶಪುರ ತಾಲೂಕಿನಲ್ಲಿ ಅನೈತಿಕ, ಅಕ್ರಮ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಬಜರಂಗದಳ ಕಾರ್ಯಕರ್ತರು ನಡೆಸುತ್ತಿದೆ' ಎಂದರು.

ದಲಿತ ಮುಖಂಡ ರಾಜಶೇಖರ್ ಮಾತನಾಡಿ, 'ಸಕಲೇಶಪುರದಲ್ಲಿ ಪರವಾನಿಗೆ ಪತ್ರದೊಂದಿಗೆ ಸಾಕುವ ಉದ್ದೇಶದಿಂದ ಹಸುವಿನ ಕರುವನ್ನು ಸಾಗಿಸುತ್ತಿದ್ದಾಗ ಬಜರಂಗದಳ  ಸದಸ್ಯ ದೀಪು ಎಂಬುವವನು ಅಕ್ರಮವಾಗಿ ವಾಹನ ತಡೆದು ಹಲಸುಲಗೆ ಗ್ರಾ.ಪಂ. ಸದಸ್ಯ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಾನೆ. ಎಲ್ಲಿಯಾದರೂ ಕಾನೂನು ಉಲ್ಲಂಘನೆಯಾಗುತ್ತಿದ್ದರೆ, ಪೋಲೀಸರ ಗಮನಕ್ಕೆ ತರುವ ಜವಾಬ್ದಾರಿ ಸಾರ್ವಜನಿಕರಿಗಿರುತ್ತದೆ. ಆದರೆ ಈ ಪ್ರಕರಣದಲ್ಲಿ ಕಾನೂನು ಉಲ್ಲಂಘನೆ ಆಗಿರದಿದ್ದರೂ ಕೂಡ ದಲಿತ ಯುವಕನನ್ನು ಅಡ್ಡಗಟ್ಟಿ ಹಲ್ಲೆ  ಜಾತಿ ದೌರ್ಜನ್ಯವಲ್ಲದೆ ಮತ್ತಿನ್ನೇನು?  ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದ ದಲಿತರ ಮೇಲೆಯೇ ಪ್ರತಿದೂರನ್ನು ಪೋಲೀಸು ಇಲಾಖೆ ದಾಖಲಿಸಿದೆ. ಇದು ಪೋಲೀಸರು ಬಜರಂಗದಳ ಕಾರ್ಯಕರ್ತರ ಜೊತೆ  ಕೈಜೋಡಿಸಿವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ' ಎಂದರು.

ಜನಪರ ಸಂಘಟನೆಯ ಮುಖಂಡ ಧರ್ಮೇಶ್ ಮಾತನಾಡಿ, 'ರಘು ಮತ್ತು ಆತನ ಸಹಚರರ ಮೇಲೆ ಈಗಾಗಲೇ ಹಲವು ಕ್ರಮಿನಲ್ ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟ್‌ನಲ್ಲಿ ಅವರ ಹೆಸರುಗಳಿವೆ. ನಿರಂತರವಾಗಿ ಸಮಾಜದಲ್ಲಿ ಶಾಂತಿಗೆ ಭಂಗ ತರುತ್ತಿರುವ ಹಿನ್ನೆಲೆಯಲ್ಲಿ ರಘು ಮತ್ತು ಆತನ ಸಹಚರರ ಮೇಲೆ ಐಪಿಸಿ 107 ಕಲಮ್ ಪ್ರಕರಣ ದಾಖಲಾಗಿದ್ದರೂ ನಿರಂತರವಾಗಿ ಅದರ ಉಲ್ಲಂಘನೆ ನಡೆಯುತ್ತಿದೆ. ಹೀಗಿದ್ದರೂ ಸಕಲೇಶಪುರದ ಪೋಲೀಸರು ಇದ್ಯಾವುದೂ ಗೊತ್ತಿಲ್ಲದಂತೆ ಸುಮ್ಮನಿದ್ದಾರೆ' ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಮತ್ತು ಜನಪರ ಸಂಘಟನೆಗಳ ಮುಖಂಡರಾದ ಟಿ.ಆರ್. ವಿಜಯಕುಮಾರ್, ಎಂ.ಜಿ. ಪೃಥ್ವಿ ಇತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News