×
Ad

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ಹೈಕೋರ್ಟ್ ಮಧ್ಯಂತರ ಆದೇಶ ಸ್ವಾಗತಾರ್ಹ: ಮೌಲಾನ ಶಾಫಿ ಸಅದಿ

Update: 2022-08-25 20:20 IST

ಬೆಂಗಳೂರು, ಆ.25: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಸ್ವಾಗತಾರ್ಹ. ಇದರಿಂದಾಗಿ, ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ, ವಿಶ್ವಾಸ ಮತ್ತಷ್ಟು ಹೆಚ್ಚಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಹೇಳಿದರು.

ಗುರುವಾರ ನಗರದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಜಾಗವು ಈದ್ಗಾ ಮೈದಾನವಾಗಿದೆ ಹಾಗೂ ಅಲ್ಲಿ ಪಾಲಿಕೆಗೆ ಯಾವುದೆ ಬಗೆಯ ಹಕ್ಕಿಲ್ಲ ಎಂದು 1965ರಲ್ಲೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿದೆ ಎಂದರು.

ಈದ್ಗಾ ಮೈದಾನ ಪಾಲಿಕೆಯ ಸ್ವತ್ತಲ್ಲ, ವಕ್ಫ್ ಬೋರ್ಡ್‍ನವರು ಖಾತೆಗಾಗಿ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ ಬಳಿಕ ನಾವು ಬಿಬಿಎಂಪಿ ಖಾತೆಗಾಗಿ ಅರ್ಜಿ ಸಲ್ಲಿಸಿದೆವು. ಪಾಲಿಕೆಯ ಜಂಟಿ ಆಯುಕ್ತರು ನಮ್ಮ ಅರ್ಜಿ ಪುರಸ್ಕರಿಸಿ ಖಾತೆ ಮಾಡಿಕೊಡಬೇಕು, ಇಲ್ಲ ನಿರ್ದಿಷ್ಟ ಕಾರಣಗಳನ್ನು ನೀಡಿ ಅರ್ಜಿ ತಿರಸ್ಕರಿಸಬೇಕು. ಆದರೆ, ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಈದ್ಗಾ ಮೈದಾನದ ಜಾಗವನ್ನು ‘ಕಂದಾಯ ಇಲಾಖೆಯ ಆಸ್ತಿ’ ಎಂದು ಆದೇಶ ಹೊರಡಿಸಿದರು ಎಂದು ಶಾಫಿ ಸಅದಿ ಹೇಳಿದರು.

ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ವಿಚಾರಣೆ ವೇಳೆ ನ್ಯಾಯಾಧೀಶರು ಜಂಟಿ ಆಯುಕ್ತರನ್ನು ಈ ಸಂಬಂಧ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ಹಿಂದಿನಂತೆ ರಮಝಾನ್ ಹಾಗೂ ಬಕ್ರೀದ್ ಸಂದರ್ಭದಲ್ಲಿ ನಮಾಝ್ ನಿರ್ವಹಿಸಲು ಮತ್ತು ಮಕ್ಕಳಿಗೆ ಆಟವಾಡಲು ನ್ಯಾಯಾಲಯ ಅವಕಾಶ ನೀಡಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೆ ಚಟುವಟಿಕೆಗಳು ನಡೆಸದಂತೆ ಮಧ್ಯಂತರ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದರು.

ರಾಜಕೀಯ ನಾಯಕರು ಯಾವುದೆ ಪಕ್ಷದವರಾಗಿರಲಿ, ರಾಜಕಾರಣ ಮಾಡಲಿ. ಆದರೆ, ಯಾವುದೊ ಒಂದು ಜಾತಿ, ಧರ್ಮದ ಆಚಾರ, ವಿಚಾರಗಳ ಕುರಿತು ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇಂತಹ ನಾಯಕರ ವಿರುದ್ಧ ಆಯಾ ಪಕ್ಷಗಳ ಮುಖಂಡರೆ ಗಮನ ಹರಿಸಬೇಕು. ಇಲ್ಲದಿದ್ದರೆ, ಸಮಾಜದಲ್ಲಿ ದೊಡ್ಡ ಅನಾಹುತವಾಗಬಹುದು ಎಂದು ಬಿಜೆಪಿ ಶಾಸಕರ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಮದ್ರಸಾ ಶಿಕ್ಷಣ ಮಂಡಳಿ: ‘ರಾಜ್ಯದಲ್ಲಿರುವ ಮದ್ರಸಾಗಳಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುವಂತಹ ಶಿಕ್ಷಣ ನೀಡಲಾಗುತ್ತಿದೆ ಎಂಬುದು ಕಪೋಲಕಲ್ಪಿತ’ ಎಂದು ವಕ್ಫ್ ಸಚಿವರು ವಿಧಾನಮಂಡಲದ ಅಧಿವೇಶನದಲ್ಲೆ ಉತ್ತರ ನೀಡಿದ್ದಾರೆ. ಮದ್ರಸಾ ಶಿಕ್ಷಣ ಮಂಡಳಿ ರಚನೆ ಕುರಿತು ಸರಕಾರ ಅಥವಾ ಶಿಕ್ಷಣ ಇಲಾಖೆ ನಮಗೆ ಯಾವುದೆ ಮಾಹಿತಿ ಒದಗಿಸಿಲ್ಲ. ಶಿಕ್ಷಣ ಸಚಿವರು ಸಭೆಗೆ ಆಹ್ವಾನಿಸಿದರೆ ನಾವು ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದು ಶಾಫಿ ಸಅದಿ ಹೇಳಿದರು.

ವಕ್ಫ್ ಅನುದಾನಿತ 1,118 ಮದ್ರಸಾಗಳಿವೆ. ಸುಮಾರು 3 ಸಾವಿರ ಮದ್ರಸಾಗಳು ವಕ್ಫ್ ಅನುದಾನವಿಲ್ಲದೆ ನಡೆಯುತ್ತಿದೆ. ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುತ್ತೇವೆ. ಅದನ್ನು ಮತ್ತಷ್ಟು ಗುಣಮಟ್ಟದೊಂದಿಗೆ ನೀಡುವುದು ಸ್ವಾಗತಾರ್ಹ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಸರಕಾರಗಳು ಮದ್ರಸಾಗಳ ಆಧುನೀಕರಣಕ್ಕೆ ದೊಡ್ಡಮೊತ್ತದ ಅನುದಾನ ಒದಗಿಸಿವೆ ಎಂದು ಅವರು ಹೇಳಿದರು.

ಮದ್ರಸಾಗಳಲ್ಲಿನ ಪಠ್ಯಕ್ರಮ ನೋಡಿದರೆ ಗೊತ್ತಾಗುತ್ತದೆ, ಅಲ್ಲಿ ರಾಷ್ಟ್ರಪ್ರೇಮ, ಅನ್ಯೋನ್ಯತೆ, ಸಹಬಾಳ್ವೆಯನ್ನು ಕಲಿಸಲಾಗುತ್ತದೆ. ಅಪನಂಬಿಕೆ ಹಾಗೂ ತಪ್ಪು ಮಾಹಿತಿಗಳಿಂದಾಗಿ ಕೆಲವರು ಮದ್ರಸಾಗಳ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮದ್ರಸಾ ಶಿಕ್ಷಣ ಅನ್ನೋದು ಸಾಮಾನ್ಯ ಶಿಕ್ಷಣಕ್ಕೆ ಎಂದಿಗೂ ತೊಡಕಾಗಿಲ್ಲ ಎಂದು ಅವರು ಹೇಳಿದರು.

ಯಾವುದಾದರೂ ಮದ್ರಸಾಗಳಲ್ಲಿ ದೇಶವಿರೋಧಿ ಚಟುವಟಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ ಅನ್ನೋದನ್ನು ನಮ್ಮ ಗಮನಕ್ಕೆ ತಂದರೆ ನಾವೆ ಅವುಗಳನ್ನು ನಿಷೇಧ ಮಾಡುತ್ತೇವೆ. ಅಲ್ಲದೆ, ಎಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂಬುದನ್ನು ಗಮನಕ್ಕೆ ತಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಫಿ ಸಅದಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ಫ್ ಮಂಡಳಿಯ ಕಾನೂನು ವಿಭಾಗದ ಅಧ್ಯಕ್ಷ ಆರ್.ಅಬ್ದುಲ್ ರಿಯಾಝ್ ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News