ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಇನ್ನೂ ಆರು ದಿನ ಭಾರೀ ಮಳೆ ಸಾಧ್ಯತೆ
ಬೆಂಗಳೂರು, ಆ.25: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆ.26ರಿಂದ 31ರವರೆಗೆ ಭಾರೀ ಮಳೆಯಾಗುವ (RAIN) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಆ.21ರಿಂದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಗುರುವಾರ ಕೂಡ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ.
ಆ.26ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಆ.31 ಮತ್ತು ಸೆ.1ರಂದು 50ರಿಂದ 60 ಮಿ.ಮೀನಷ್ಟು ಮಧ್ಯಮ ಪ್ರಮಾಣದ ಮಳೆ ಬರಲಿದೆ. ಸೆ.3ರವರೆಗೂ ಮಳೆ ರಾಜ್ಯದಲ್ಲಿ ಮುಂದುವರೆಯಲಿದೆ. ಕರಾವಳಿ ಭಾಗದಲ್ಲಿ ಶುಕ್ರವಾರದಿಂದ ಮಳೆ ಪ್ರಮಾಣ ಇಳಿಮುಖವಾಗಲಿದ್ದು, ರಾಜ್ಯದ ಒಳನಾಡಿನಲ್ಲಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಸಾಧಾರಣ ಮಳೆ ಮುಂದುವರೆಯಲಿದೆ. ಆದರೆ ಕೆಲವೆಡೆ ಚದುರಿದಂತೆ ಭಾರೀ ಮಳೆಯಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.