ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ: ಎಡಿಜಿಪಿ ಅಲೋಕ್ ಕುಮಾರ್

Update: 2022-08-25 17:57 GMT

ಮಡಿಕೇರಿ ಆ25 : ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ರಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ, ಸಾರ್ವಜನಿಕರೊಂದಿಗೆ ನಾವಿದ್ದೇವೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ ಕುಮಾರ್ ಸ್ಪಷ್ಟ ಸಂದೇಶ ನೀಡಿದ್ದಾರೆ. 

ರಾಜಕೀಯ ಪಕ್ಷಗಳು ಮಡಿಕೇರಿ ಚಲೋ ಹಾಗೂ ಜನಜಾಗೃತಿ ಸಮಾವೇಶವನ್ನು ಮುಂದೂಡಿದ್ದರೂ ಆ.27ರ ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಧೈರ್ಯ ತುಂಬುವ ನಿಟಿನಲ್ಲಿ ಪೊಲೀಸ್ ಇಲಾಖೆ ನಗರದಲ್ಲಿ ಬೃಹತ್ ಪಥ ಸಂಚಲನ ನಡೆಸಿತು. ನಗರದ ಎ.ವಿ. ಶಾಲೆ ಬಳಿಯಿಂದ ಹೊರಟ ಪೊಲೀಸ್ ಪಥ ಸಂಚಲನಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಚಾಲನೆ ನೀಡಿದರಲ್ಲದೇ, ಸ್ವತಃ ತಾವೇ ಪಥ ಸಂಚಲನವನ್ನು ಮುನ್ನಡೆಸಿದರು. 

ಮಾರುಕಟ್ಟೆ ರಸ್ತೆ, ಮಹದೇವಪೇಟೆ, ಇಂದಿರಾ ಗಾಂಧಿ ವೃತ್ತ, ಸ್ಕ್ವಾಡರ್ನ್ ಲೀಡರ್ ಎ.ಬಿ. ದೇವಯ್ಯ ವೃತ್ತ, ಮೇಜರ್ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಗಳು ಪಥ ಸಂಚಲನ ನಡೆಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆ ಸಮರ್ಥವಾಗಿದೆ ಎಂದು ಸಾರ್ವಜನಿಕರಿಗೆ ಸಂದೇಶ ನೀಡಿದರು. ಯಾವುದೇ ರೀತಿಯ ಕಿಡಿಗೇಡಿ ಕೃತ್ಯಗಳಿಗೆ ಅವಕಾಶ ಇಲ್ಲ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪಥ ಸಂಚಲನದ ಮೂಲಕ ಅಭಯ ನೀಡಲಾಯಿತು.

ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಕೊಡಗು ಸೂಕ್ಷ್ಮ ಜಿಲ್ಲೆಯಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆಕ್ಷನ್ 144 ಅಡಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಪೊಲೀಸ್ ಇಲಾಖೆ ಜಿಲ್ಲೆಯನ್ನು ಸಂಪರ್ಕಿಸುವ ವಿವಿಧ ಕಡೆಗಳಲ್ಲಿ 20ಕ್ಕೂ ಹೆಚ್ಚು ಚೆಕ್‍ಪೋಸ್ಟ್‍ಗಳನ್ನು ತೆರೆದಿದ್ದು, ಕಟ್ಟು ನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಕೊಡಗು ಪ್ರವಾಸಿ ಜಿಲ್ಲೆಯಾಗಿರುವ ಕಾರಣ ಹೊರ ಊರುಗಳಿಂದ ಬರುವವರ ಉದ್ದೇಶಗಳನ್ನು ತಿಳಿದುಕೊಂಡು ಅವರ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿದೆ. ಈ ದಿಸೆಯಲ್ಲಿ ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಕೇರಳ-ಕೊಡಗು ಗಡಿ ಭಾಗಗಳ ಕುಟ್ಟ, ಮಾಕುಟ್ಟ, ಕರಿಕೆ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆಗಳು ನಡೆಯುವ ಲಕ್ಷಣಗಳು ಕಂಡು ಬಂದಲ್ಲಿ ಮತ್ತಷ್ಟು ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲೆಗೆ ನಿಯೋಜಿಸಲಾಗುತ್ತದೆ. ಈ ಹಿಂದಿನ ಘಟನೆಗಳನ್ನು ಅವಲೋಕಿಸಿ ಕಿಡಿಗೇಡಿ ಕೃತ್ಯ ಎಸಗುವ ಸಾಧ್ಯತೆ ಇರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಮಾಹಿತಿ ನೀಡಿದರು. 

ಕೊಡಗು ಜಿಲ್ಲೆಯಲ್ಲಿ ಯಾವುದೇ ರೀತಿಯ ಶಾಂತಿ ಭಂಗ ಕೃತ್ಯಗಳು ನಡೆದಲ್ಲಿ ಸಾರ್ವಜನಿಕರಿಗೆ ಮತ್ತು ಪ್ರವಾಸೋದ್ಯಮಕ್ಕೆ ದಕ್ಕೆ ಬರುತ್ತದೆ. ಅದನ್ನು ತಡೆಯಲು ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದು ಅಲೋಕ್ ಕುಮಾರ್ ಅಭಯ ನೀಡಿದರು. ಕೊಡಗು ಜಿಲ್ಲೆಯಲ್ಲಿ ಶಾಂತಿ ನೆಲಸುವ ಮೂಲಕ ಮತ್ತಷ್ಟು ಅಭಿವೃದ್ದಿ ಕಾಣುವಂತಾಗಲಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಆಶಿಸಿದರು. 

ಪಥ ಸಂಚಲನದಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಅಯ್ಯಪ್ಪ, ಚಾಮರಾಜನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಜಿಲ್ಲೆಯ ಎಲ್ಲಾ ಠಾಣೆಗಳ ಅಧಿಕಾರಿಗಳು, ಕೊಡಗು ಕಮಾಂಡೋ ಪಡೆ, ಜಿಲ್ಲಾ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳು, ಕೆಎಸ್‍ಆರ್‍ಪಿ ಪೊಲೀಸ್ ತುಕಡಿಗಳ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News