ಡಿ.ಕೆ. ಶಿವಕುಮಾರ್ ಆಪ್ತನಿಗೆ ಸಿಬಿಐ ನೋಟಿಸ್

Update: 2022-08-25 18:13 GMT

ಬೆಂಗಳೂರು, ಆ.25: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಎನ್ನಲಾದ ವಿಜಯ್ ಕುಮಾರ್ ಮುಳುಗುಂದ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.

ಆ.30ರಂದು ಬೆಂಗಳೂರಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರ ನಿವಾಸ ಕಚೇರಿ ಮತ್ತು ಆಪ್ತರ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ದಾಳಿ ಸಂಬಂಧ ವಿಚಾರಣೆಗೆ ಸಿಬಿಐ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ವಿಚಾರಣೆಗೆ ಹಾಜರಾಗುವ ದಿನದಂದು ತಮ್ಮ ಉದ್ಯಮ ಕುರಿತು ಹಾಗೂ ಆದಾಯ ಮೂಲಗಳ ಬಗೆಗಿನ ಎಲ್ಲ ದಾಖಲಾತಿಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ.

ಪ್ರಕರಣ ಸಂಬಂಧ ನೋಟಿಸ್ ಜಾರಿ ಮಾಡಿರುವ ಸಿಬಿಐ ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News