40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ: ಸಿದ್ದರಾಮಯ್ಯ ಸವಾಲು

Update: 2022-08-26 10:44 GMT

ಮೈಸೂರು, ಆ.26: ನಾನು ಸತ್ಯ ಹರಿಶ್ಚಂದ್ರ ಅಲ್ಲ, ನಮ್ಮ ವಂಶದವರು ಸತ್ಯ ಹರಿಶ್ಚಂದ್ರರಲ್ಲ. ಆದರೆ ಬಸವರಾಜ ಬೊಮ್ಮಾಯಿ ಅಸಮರ್ಥ ಮುಖ್ಯಮಂತ್ರಿ ರಾಜ್ಯ ಸರ್ಕಾರ ಸತ್ತುಹೋಗಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ‌ ಸಂವಾದದಲ್ಲಿ ಶುಕ್ರವಾರ ಮಾತನಾಡಿದ ಅವರು, ನಾನು ಸತ್ಯ ಹರಿಶ್ಚಂದ್ರನಲ್ಲ, ನಮ್ಮ ವಂಶವೂ ಸತ್ಯ ಹರಿಶ್ಚಂದ್ರನದಲ್ಲ.  ನನ್ನ ಅವಧಿಯಲ್ಲಿ ನಡೆದಿದೆ ಎಂಬ ಭ್ರಷ್ಟಾಚಾರದ ಕುರಿತು ಐದು ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಿದ್ದೇನೆ. ಆದರೆ ನಿಮ್ಮ ಸರ್ಕಾರದಲ್ಲಿನ  ಭ್ರಷ್ಟಾಚಾರ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ  ಆರೋಪ ಮಾಡಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ಹೇಳುತ್ತಿದ್ದರೂ ಯಾಕೆ ನೀವು ಒಪ್ಪಿಸುತ್ತಿಲ್ಲ ಎಂದು ಸಿಎಂ ಬೊಮ್ಮಾಯಿಯವರನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕೆಪಿಟಿಸಿಎಲ್ ನೇಮಕಾತಿ ಅಕ್ರಮದ ಹೊಣೆ ಸಚಿವ ಸುನೀಲ್ ಕುಮಾರ್ ಹೊರಬೇಕು: ಸಿದ್ದರಾಮಯ್ಯ

ರಾಜ್ಯ ಸರಕಾರ ಸಂಪೂರ್ಣವಾಗಿ ಸತ್ತುಹೋಗಿದೆ. ಇವರ ಭ್ರಷ್ಟಾಚಾರ ಕುರಿತು ಜನರು, ಅಧಿಕಾರಿಗಳು ಮಾತನಾಡುತ್ತಿದ್ದಾರೆ. ಜೊತೆಗೆ ವಿಧಾನ ಸೌಧದ ಗೋಡೆಗಳು ಇದು ಭ್ರಷ್ಟಾಚಾರ ಸರ್ಕಾರ ಎಂದು ಹೇಳುತ್ತಿದೆ. ಇದಕ್ಕಿಂತ ಸಾಕ್ಷಿ ಬೇಕೆ?. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅಸಮರ್ಥ ಮುಖ್ಯಮಂತ್ರಿಯಾಗಿದ್ದಾರೆ. ಇವರ  ಆಡಳಿತವನ್ನು ಆರೆಸ್ಸೆಸ್ ನಡೆಸುತ್ತಿದೆ ಎಂದು ಕಿಡಿಕಾರಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರ ಆರೋಪ ಸುಳ್ಳೆಂದು ಸಾಬೀತು ಮಾಡಲು ಇವರಿಗೆ ಧೈರ್ಯ ಇಲ್ಲ, ಹಾಗಾಗಿ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇವರಿಗೆ ನಿಜವಾಗಲೂ ನೈತಿಕತೆ ಇದ್ದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಇತ್ತೀಚೆಗೆ ಉಮೇಶ್‌ ಕತ್ತಿ ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬಡವರಿಗೆ ಅನ್ನಭಾಗ್ಯದ ಅಕ್ಕಿ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಇದು ಮಂತ್ರಿಮಂಡಲದಲ್ಲಿ ಅವರು ಮಾಡುವ ಚರ್ಚೆಯ ವಿಷಯವನ್ನು ಹೇಳಿದ್ದಾರೆ. ಇದಕ್ಕೆ 2 ಕಾರಣಗಳಿರಬಹುದು, ಒಂದು ಅಕ್ಕಿ ಕೊಡಲು ದುಡ್ಡಿಲ್ಲದೆ ಇರಬಹುದು, ಇನ್ನೊಂದು ಹಸಿದವರ ಮತ್ತು ಬಡವರ ಮೇಲೆ ಅವರಿಗೆ ವಿರೋಧ ಇರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳಿಗಿಂತ ಹೆಚ್ಚಾಗಿದೆ. ಈ ಸರ್ಕಾರ ಜನರ ಆಶೀರ್ವಾದದೊಂದಿಗೆ ಬಂದ ಸರ್ಕಾರ ಅಲ್ಲ, ಅನೈತಿಕವಾಗಿ ರಚನೆಯಾಗಿರುವ ಸರ್ಕಾರ. ಕಳೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ನಾವು 80 ಹಾಗೂ ಜೆಡಿಎಸ್‌ 37 ಸ್ಥಾನಗಳನ್ನು ಗೆದ್ದಿತ್ತು. ಶೇಕಡಾವಾರು ಮತಗಳನ್ನು ನೋಡಿದಾಗ ನಮ್ಮ ಪಕ್ಷ ಹೆಚ್ಚು ಮತ ಪಡೆದಿತ್ತು, ನಾವು 38.14% ಮತಗಳನ್ನು ಪಡೆದಿದ್ದೆವು, ಬಿಜೆಪಿ 36.34% ಹಾಗೂ 18% ಮತಗಳನ್ನು ಜೆಡಿಎಸ್‌ ಪಡೆದಿತ್ತು. ನಾವು 1.8% ಮತಗಳನ್ನು ಹೆಚ್ಚು ಪಡೆದಿದ್ದರೂ ನಮಗೆ 80 ಸೀಟು ಹಾಗೂ ಬಿಜೆಪಿಗೆ 104 ಸೀಟು ಬಂದಿತ್ತು. ಆ ನಂತರ ಯಡಿಯೂರಪ್ಪ ಅವರು ಆಪರೇಷನ್‌ ಕಮಲ ಮಾಡಿ, ಶಾಸಕರನ್ನು ಕೊಂಡುಕೊಂಡು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು ಎಂದು ಬೇಸರ ವ್ಯಕ್ತಪಡಿಸಿದರು.

ಆಗಸ್ಟ್ 24ರಂದು ಕೆಂಪಣ್ಣನವರು ಸೇರಿದಂತೆ ಸುಮಾರು 20 ಜನ ನನ್ನನ್ನು ಭೇಟಿ ಮಾಡಿ, ಮತ್ತೊಂದು ಮನವಿ ಪತ್ರ ನೀಡಿದ್ದಾರೆ. ಮನವಿಯಲ್ಲಿ ʼ ಇಷ್ಟು ದಿನ ಕಳೆದರೂ ಯಾವ ಕ್ರಮ ಕೈಗೊಂಡಿಲ್ಲ, ಬೆಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳಲ್ಲಿ ಕಮಿಷನ್‌ 40% ಇಂದ 50% ಗೆ ಹೆಚ್ಚಾಗಿದೆ. ಕೆಲವು ಕಡೆ 100% ಕಮಿಷನ್‌ ತೆಗೆದುಕೊಳ್ಳಲಾಗುತ್ತಿದೆ. ಎಲ್ಲಾ ಸಚಿವರು, ಮುಖ್ಯಮಂತ್ರಿ ಕೂಡ ಕಮಿಷನ್‌ ತೆಗೆದುಕೊಳ್ತಾರೆ, ಅದರಲ್ಲೂ ಮುಖ್ಯವಾಗಿ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಒತ್ತಡ ಹಾಕಿ ಕಮಿಷನ್‌ ಪಡೆಯುತ್ತಾರೆʼ ಎಂದು ಹೇಳಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ದಾಖಲೆ ನೀಡಲಿ ಎನ್ನುತ್ತಾರೆ, ಆದರೆ ಸಾಮಾನ್ಯವಾಗಿ ತಮ್ಮ ಮೇಲೆ ಕಿರುಕುಳ ನೀಡುತ್ತಾರೆ, ತಮಗೆ ಕಾಮಗಾರಿಗಳನ್ನು ನೀಡಲ್ಲ ಎಂದು ಗುತ್ತಿಗೆದಾರರು ತಮ್ಮ ಹೆಸರು ಬಹಿರಂಗ ಮಾಡಿಕೊಳ್ಳಲು ಬಯಸಲ್ಲ. ಆದರೆ ಈಗ ಸರ್ಕಾರದ ಕಿರುಕುಳ ತಡೆಯಾಗದೆ ಈಗ ಹೊರಬಂದು ಅಸಮಧಾನ ತೋಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಕೆಂಪಣ್ಣನವರಿಗೆ ನಿಮ್ಮ ಬಳಿ ದಾಖಲೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ, ನಿಮ್ಮ ಬಳಿ ಸರಿಯಾದ ದಾಖಲೆಗಳು ಇವೆಯಾ ಎಂದು ನಾನು ಕೇಳಿದೆ. ಅದಕ್ಕೆ ಕೆಂಪಣ್ಣ, ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ನಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನು ತನಿಖೆ ವೇಳೆ ನೀಡುತ್ತೇವೆ, ಒಂದು ವೇಳೆ ನಾವು ಮಾಡಿರುವ ಆರೋಪವನ್ನು ಸಾಬೀತು ಮಾಡಲು ಆಗಿಲ್ಲ ಎಂದಾದರೆ ಯಾವುದೇ ರೀತಿಯ ಕಾನೂನಾತ್ಮಕ ಶಿಕ್ಷೆಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು. ಸಾಮಾನ್ಯವಾಗಿ ಕಮಿಷನ್‌ ಅಥವಾ ಲಂಚ ಪಡೆಯುವ ವೇಳೆ ಯಾವ ದಾಖಲೆಗಳು ಇರಲ್ಲ ಎಂದು ಹೇಳಿದರು.

ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ, ನಗರ ಉಪಾಧ್ಯಕ್ಷ ಬಸವಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News