ಮಡಿಕೇರಿ: ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಕಾಮಗಾರಿ ವಿರುದ್ಧ ಶಾಸಕ ಅಪ್ಪಚ್ಚುರಂಜನ್ ದೂರು

Update: 2022-08-26 12:11 GMT

ಮಡಿಕೇರಿ ಆ.26 : ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ನಿರ್ಮಾಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದರೊಂದಿಗೆ ಇದಕ್ಕೆ ಕಾರಣರಾದ ಇಂಜಿನಿಯರ್ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಒತ್ತಾಯಿಸಿದ್ದಾರೆ. 

ಈ ಸಂಬಂಧವಾಗಿ ಲೋಕೋಪಯೋಗಿ ಇಲಾಖೆಯ ಗುಣ ನಿಯಂತ್ರಣ ವಿಭಾಗದ  ಮುಖ್ಯ ಇಂಜಿನಿಯರ್ ಹಾಗೂ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಅವರು ಪತ್ರ ಬರೆದಿದ್ದಾರೆ. ಮಡಿಕೇರಿಯ ಜಿಲ್ಲಾಧಿಕಾರಿಯವರ ಕಚೇರಿಯ ಆವರಣದಲ್ಲಿ ರಸ್ತೆಗೆ ಹೊಂದಿಕೊಂಡಂತೆ 7 ಕೋಟಿ ರೂ.ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಇದನ್ನು ತಾನು ಖುದ್ದು ಪರಿಶೀಲಿಸಿ ಕಾಮಗಾರಿಯು ಕೊಡಗು ಜಿಲ್ಲೆಗೆ ಹೊಂದಿಕೊಳ್ಳದೇ ಇರುವುದರಿಂದ ತಳಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ತಳಪಾಯ ನಿರ್ಮಿಸಿ ಮೇಲ್ಭಾಗದವರೆಗೆ ಕಾಂಕ್ರಿಟ್ ಗೋಡೆ ನಿರ್ಮಿಸುವಂತೆ ಸಲಹೆ ನೀಡಿದ್ದೆ. 

ಆದರೆ ದೆಹಲಿಯಿಂದ ಬಂದ ಇಂಜಿನಿಯರ್ ಅವರ ನಿರ್ದೇಶನದಂತೆ  ತಡೆಗೋಡೆ ನಿರ್ಮಿಸುತ್ತಿರುವುದಾಗಿ ಇಲ್ಲಿನ ಇಂಜಿನಿಯರ್ ಹಾಗೂ ಗುತ್ತಿಗೆದಾರರು ತಿಳಿಸಿದ್ದು, ನನ್ನ ಸಲಹೆಯನ್ನು ಪರಿಗಣಿಸಿರುವುದಿಲ್ಲ. ಇದೀಗ ನಿರ್ಮಾಣಗೊಂಡಿರುವ ತಡೆಗೋಡೆಯು ಇತ್ತೀಚೆಗೆ ಸುರಿದ ಮಳೆಯಿಂದ ಬೀಳುವ ಹಂತಕ್ಕೆ ತಲುಪಿದ್ದು, ಸಾರ್ವಜನಿಕರಿಗೆ ಹಾಗೂ ಆಸ್ತಿಪಾಸ್ತಿಗಳಿಗೆ ತೊಂದರೆಯಾಗದಂತೆ ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್ ಮಾಡುವ ಪರಿಸ್ಥಿತಿ ಉಂಟಾಗಿತ್ತು ಎಂದು ಶಾಸಕರು ಗಮನ ಸೆಳೆದಿದ್ದಾರೆ. 

ತಡೆಗೋಡೆಗೆ 7 ಕೋಟಿ ರೂ. ವೆಚ್ಚ ಮಾಡಿದ್ದರೂ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎನ್ನುವ ಅಂಶ ಮೇಲ್ನೋಟಕ್ಕೆ ಕಂಡು ಬಂದಿದೆ. ತಾವುಗಳು ಖುದ್ದು ಪರಿಶೀಲಿಸಿ ಸಂಬಂಧಿಸಿದ ಕಾಮಗಾರಿಯನ್ನು ಕೈಗೊಂಡ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಲ್ಲದೆ, ಸಂಬಂಧಿಸಿದ ಇಂಜಿನಿಯರ್ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರಕಾರದ ಕಾರ್ಯದರ್ಶಿಗಳಿಗೆ ಅಪ್ಪಚ್ಚುರಂಜನ್ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News