ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

Update: 2022-08-26 12:40 GMT

ಬೆಂಗಳೂರು, ಆ.26: ರಾಜ್ಯ ಸರಕಾರವು ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ ಜಿ ಕೆಟಗರಿ ಸೈಟು ಹಂಚಿಕೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸಿದ್ದರೂ ಬದಲಿ ನಿವೇಶನ ಹಂಚಿಕೆ ಎಂಬ ವಾಮಮಾರ್ಗವನ್ನು ಹುಡುಕಿಕೊಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಇನ್ನಿತರ ಪ್ರಭಾವಿಗಳಿಗೆ ಕೋಟ್ಯಂತರ ರೂ. ಬೆಲೆಬಾಳುವ ನಿವೇಶನಗಳನ್ನು ಹಂಚಿಕೆ ಮಾಡಿರುವ ಸರಕಾರದ ನೀತಿಯನ್ನು ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ. 

ಶುಕ್ರವಾರ ನಗರದಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಈ ಕೂಡಲೇ ಈ ಬಿಡಿಎ ಆಯುಕ್ತರನ್ನು ವರ್ಗಾವಣೆಗೊಳಿಸಬೇಕೆಂದು ಮೌಖಿಕ ಆದೇಶ ನೀಡಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತರನ್ನು ಭೇಟಿಯಾಗಿ ಇಂದು ಆಮ್ ಆದ್ಮಿ ಪಕ್ಷದಿಂದ ದೂರನ್ನು ದಾಖಲಿಸಲಾಗಿದೆ ಎಂದರು.

ಕಳೆದ 4 ವರ್ಷಗಳಿಂದ ಅತಿವೃಷ್ಟಿ ಹಾವಳಿಯಿಂದ ರಾಜ್ಯದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿದ್ದರು ಸಹ ಅವರಿಗೆ ಸೂಕ್ತ ಮನೆಗಳನ್ನು ಕಟ್ಟಿಕೊಡಲು ವಿಫಲರಾಗಿರುವ ಬಿಜೆಪಿ ಸರಕಾರ ಈಗ ತನ್ನ ಮಂತ್ರಿ ಹಾಗೂ ಪ್ರಭಾವಿಗಳಿಗೆ ಈ ರೀತಿಯ ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ನಿವೇಶನಗಳನ್ನು ಹಂಚಿಕೆ ಮಾಡುವ ಪರಿ 40 ಪರ್ಸೆಂಟ್ ಕಮಿಷನ್‍ನ ಮತ್ತೊಂದು ರೂಪವಾಗಿದೆ ಎಂದು ಅವರು ಕಿಡಿಗಾರಿದರು.

ಸುಪ್ರೀಂಕೋರ್ಟ್ 2021ರ ಅ.29ರಂದು ಹೊರಡಿಸಿದ ಆದೇಶಕ್ಕೆ ವ್ಯತಿರಿಕ್ತವಾಗಿ ಈ ರೀತಿಯ ಕೋಟ್ಯಂತರ ರೂ. ಬೆಲೆಬಾಳುವ ಆರ್‍ಎಂವಿ ಬಡಾವಣೆಯಂತಹ ಪ್ರತಿಷ್ಠಿತ ಜಾಗದಲ್ಲಿ ಮಂತ್ರಿ ಮಹೋದಯರಿಗೆ ಸೈಟು ಹಂಚಿಕೆಯ ಅವ್ಯವಹಾರಗಳಲ್ಲಿ ಮುಳುಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ದೇಶದ ಅತ್ಯುನ್ನತ ನ್ಯಾಯಾಲಯಗಳ ಆದೇಶಗಳಿಗೂ ಕಿಂಚಿತ್ತೂ ಕಿಮ್ಮತ್ತು ಈ ಬಿಜೆಪಿ ಸರಕಾರ ನೀಡುತ್ತಿಲ್ಲವೆಂದು ಎಂದು ಮೋಹನ್ ದಾಸರಿ ವಿಷಾದ ವ್ಯಕ್ತಪಡಿಸಿದರು.

‘ಉಂಡೂ ಹೋದ ಕೊಂಡೂ ಹೋದ’ ಎಂಬಂತೆ ರಾಜ್ಯದಲ್ಲಿ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಗೆಡವಿದ ಗೃಹಸಚಿವ ಆರಗ ಜ್ಞಾನೇಂದ್ರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತಿದೆ ಎಂದು ಮೋಹನ್ ದಾಸರಿ ಹೇಳಿದರು.

ಈ ಕೂಡಲೇ ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ವಜಾಗೊಳಿಸಬೇಕು ಅಥವಾ ಮರ್ಯಾದೆಯಿಂದ ತಾವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಆಮ್ ಆದ್ಮಿ ಪಕ್ಷದ ರಾಜ್ಯ ವಕ್ತಾರ ಕೆ.ಮಥಾಯಿ, ಆಮ್ ಆದ್ಮಿ ಪಕ್ಷವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರವಾದ ಹೋರಾಟಕ್ಕೆ ಇಳಿಯಲಿದೆ ಎಂದು ಸರಕಾರವನ್ನು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News