ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಂವಿಧಾನದ ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ: ಸಿಎಂ ಬೊಮ್ಮಾಯಿ

Update: 2022-08-26 12:58 GMT

ತುಮಕೂರು.ಆ.26: 'ಭಾರತ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಸಂವಿಧಾನದ ಪೂರ್ಣ ಜಾರಿ ಇದುವರೆಗೂ ಸಾಧ್ಯವಾಗಿಲ್ಲ.ಸರ್ವರಿಗೂ ಸಮಪಾಲು, ಸರ್ವರಿಗೂ ಸಮಪಾಲು ಎಂಬುದನ್ನು ಶ್ರಮಿಕ ವರ್ಗಗಳಿಗೆ ಮರೀಚಿಕೆಯಾಗಿದ್ದು, ಇದರನ್ನು ಸರಿಪಡಿಸುವ ನಿಟ್ಟಿನಲ್ಲಿಯೇ ಕೃಷಿಯಾಧಾರಿತ ಕಸುಬುಗಳ ಅಭಿವೃದ್ದಿಗೆ ಪ್ರತ್ಯೇಕ ಯೋಜನೆ ರೂಪಿಸಲಾಗುತ್ತಿದೆ' ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ಗಾಜಿನಮನೆಯಲ್ಲಿ ಶ್ರೀಮಹಾಲಕ್ಷ್ಮಿ ತಿಗಳ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀಜ್ಞಾನಾನಂದಪುರಿ ಸ್ವಾಮೀಜಿಗಳ ಗುರುವಂದನೆ ಹಾಗೂ ತಿಗಳ ಕ್ಷತ್ರಿಯ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಭೂಮಿಯನ್ನೇ ನಂಬಿ ಬದುಕುತ್ತಿರುವ ತಿಗಳ,ಕಂಬಾರ,ಚಮ್ಮಾರ ಸೇರಿದಂತೆ ಕೃಷಿಯಾಧಾರಿತ ಕುಲಕಸುಬಗಳನ್ನು ಪ್ರೋತ್ಸಾಹಿ ಸಲು ಸುಮಾರು 400 ಕೋಟಿ ರೂಗಳನ್ನು ಕಳೆದ ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ ಎಂದರು.

ತಿಗಳ ಸಮುದಾಯಕ್ಕೆ ದೊಡ್ಡ ಇತಿಹಾಸವಿದೆ.ಮಹಾಭಾರತದಲ್ಲಿ ಸತ್ಯದ ಪರ ನಿಂತವರು ನೀವು, ಅಧುನಿಕ ಭಾರತದಲ್ಲಿ ಪ್ರಜಾಪ್ರಭುತ್ವದ ಪರ ನಿಲ್ಲಬೇಕಿದೆ.ಯಾರು ನಿಮ್ಮ ಬಗ್ಗೆ ಕಾಳಜಿ ಹೊಂದಿದ್ದಾರೋ, ಅಂತವರನ್ನು ಕೈಹಿಡಿಯುವ ಕೆಲಸವನ್ನು ತಿಗಳ ಸಮುದಾಯ ಮಾಡಬೇಕಿದೆ.ಮಹಾಭಾರತದಲ್ಲಿ ಸತ್ಯದ ಪರ ನಿಂತಿದ್ದಕ್ಕೆ ಜಯ ದೊರೆಯಿತು.ಈಗಲೂ ನೀವು ಯಾರ ಪರವಾಗಿ ನಿಲ್ಲುವಿರೋ ಅವರಿಗೆ ಜಯ ಕಟ್ಟಿಟ್ಟ ಬುತ್ತಿದೆ.ಕೇವಲ ಭಾಷಣಗಳಿಂದ ಬದಲಾವಣೆ ಸಾಧ್ಯವಿಲ್ಲ.ನಿಮ್ಮ ಬದುಕಿನಲ್ಲಿ ಬದಲಾವಣೆ ಬರಬೇಕಾದರೆ ನಿಮ್ಮ ಬೇವರಿಗೆ ಬೆಲೆ ಸಿಗಬೇಕು.ಈ ನಿಟ್ಟಿನಲ್ಲಿ ಸರಕಾರ ನಿಮ್ಮ ಪರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಇದು ಜ್ಞಾನದ ಯುಗ. ಈ ಹಿಂದೆ ಇದ್ದ ಹಣ ಬಲ, ತೊಳ್ಬಲಗಳಿಗೆ ಇಂದು ಬೆಲೆ ಇಲ್ಲ. ನಿಮ್ಮ ಮಣ್ಣಿನ ಕಾಯಕದ ಜೊತೆಗೆ ಶಿಕ್ಷಣದ ಕಡೆಗೆ ನೀವೆಲ್ಲರೂ ಒತ್ತು ನೀಡಬೇಕಿದೆ. ನಿಮ್ಮ ಮಕ್ಕಳು ಸರಕಾರದ ಉನ್ನತ ಹುದ್ದೆಗಳಲ್ಲಿ ಕೂರುವಂತಾದರೆ ಹೆಚ್ಚಿನ ಶಕ್ತಿ ಬರುತ್ತದೆ. ಹಾಗಾಗಿಯೇ ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ದಿಗಾಗಿ ವಿಶೇಷ ವಿಭಾಗ ತೆರೆದು ಶೈಕ್ಷಣಿಕ,ಅರ್ಥಿಕ,ಉದ್ಯೋಗಿಕ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿ.ಎಂ.ನುಡಿದರು.

ತಿಗಳ ಸಮುದಾಯದ ಮುಖಂಡರು ಸಲ್ಲಿಸಿರುವ ಬೇಡಿಕೆಯಂತೆ ಹಾಸ್ಟಲ್‍ಗಳ ನಿರ್ಮಾಣಕ್ಕೆ ಐದು ಕೋಟಿ ರೂಗಳು,ತುಮಕೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ನೆನೆಗುದಿಗೆ ಬಿದ್ದಿರುವ 23 ಸಮುದಾಯ ಭವನಗಳ ಕಾಮಗಾರಿಗೆ 12 ಕೋಟಿ ರೂಗಳು ಹಾಗೂ ಸರಕಾರದಿಂದಲೇ ಆಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಿಸಲು ಅಗತ್ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ತೋಟಗಾರಿಕೆಗೆ ನಾಂದಿ ಹಾಡಿದ ಈ ಸಮುದಾಯಕ್ಕೆ ಬ್ಯಾಂಕುಗಳ ಸಹಕಾರದಲ್ಲಿ ಐವತ್ತು ಸಾವಿರ ರೂ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ,ಅಲ್ಲದೆ, ತಿಗಳ ಸಮುದಾಯದ ಇತಿಹಾಸ, ಪುರಾಣವನ್ನು ಮುಂದಿನ ಪೀಳಿಗೆಗೆ ನೀಡುವ ಉದ್ದೇಶದಿಂದ ತುಮಕೂರು ವಿವಿಯಲ್ಲಿ ಆಗ್ನಿಬನ್ನಿರಾಯಸ್ವಾಮಿ ಅಧ್ಯಯನ ಪೀಠ ತೆರೆಯಲು ಸಹ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಭರವಸೆ ನೀಡಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ,ಕೃಷಿಯಿಂದಲೇ ಜೀವನ ನಡೆಸುತ್ತಿರುವ ಅತ್ಯಂತ ಪ್ರಾಮಾಣಿಕ ಸಮುದಾಯ. ಆದರೆ ಇಂದಿಗೂ ಬಡತನದಿಂದ ಮುಕ್ತವಾಗಿಲ್ಲ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೆ ನೀವು ಸಹ ಅರ್ಥಿಕವಾಗಿ ಸಧೃಡರಾಗಬಹುದು.ಈ ನಿಟ್ಟಿನಲ್ಲಿ ಜೆಡಿಎಸ್ ಸರಕಾರ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ 1-12ತರಗತಿಯವರೆಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದೇವೆ.ಇದಕ್ಕೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಪಂಚರತ್ನ ಕಾರ್ಯಕ್ರಮ ಘೋಷಣೆ ಮಾಡಲಾಗುವುದು. ಮೊದಲು ನಿಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದಾಗಿ, ಒಗ್ಗಟ್ಟಿನಲ್ಲಿ ಶಕ್ತಿ ಇದೆ. ಇಂತಹ ಸಮಾವೇಶಗಳಿಂದ ನಿಮ್ಮ ಶಕ್ತಿ ಪ್ರದರ್ಶನ ಮಾಡಿ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಹಾಗೂ ಕರ್ನಾಟಕ ಕ್ಷತಿಯ ತಿಗಳ ವಿದ್ಯಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ, ರಾಜ್ಯದ 28 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿರುವ ತಿಗಳ ಸಮುದಾಯ ಜಾಗೃತಿ ಕೊರತೆಯಿಂದಾಗಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಇಲ್ಲದಂತಾಗಿದೆ.ಪ್ರವರ್ಗ 2 ಎ ನಲ್ಲಿರುವ ಸಮಾಜವನ್ನು ಪ್ರವರ್ಗ ಒಂದಕ್ಕೆ ತಂದರೆ ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಬಿಬಿಎಂಪಿ ವಿರೋಧಪಕ್ಷದ ಮಾಜಿ ನಾಯಕ ಎ.ಹೆಚ್.ಬಸವರಾಜು ಜನಾಂಗದ ಪರವಾಗಿ ಹಲವರು ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಮಹಾಲಕ್ಷ್ಮಿ ತಿಗಳ ಮಹಾಸಂಸ್ಥಾನ ಟ್ರಸ್ಟ್‍ನ ಶ್ರೀಜ್ಞಾನಾನಂದಪುರಿ ಸ್ವಾಮೀಜಿಗಳು,ಇಂದಿನ ಸಮಾವೇಶ ಇತಿಹಾಸ ನಿರ್ಮಾಣ ಮಾಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಕ್ಷತ್ರಿಯ ಸಮುದಾಯ ಜನರು ಇಲ್ಲಿಗೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ, ಪಕ್ಷಾತೀತವಾಗಿ ನೀವು ತೋರಿದ ಪ್ರೀತಿಗೆ ಅಭಾರಿ ಎಂದರು.

ವೇದಿಕೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಾಜಿ ಸಚಿವ ಸಿ.ಪಿ.ಯೋಗೀಶ್ವರ್, ಸಂಸದ ಜಿ.ಎಸ್.ಬಸವರಾಜು,ಶಾಸಕರಾದ ಜೋತಿಗಣೇಶ್,ಡಾ.ರಾಜೇಶಗೌಡ, ಮುರುಳೀಧರ ಹಾಲಪ್ಪ, ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ, ಶ್ರೀನಿರಂಜನಾ ನಂದಪುರಿ ಸ್ವಾಮೀಜಿ,ಶ್ರೀಮಹೇಶಾನಂದ ಸ್ವಾಮೀಜಿ,ಶ್ರೀಸದ್ಗುರು ಶ್ರೀಸೋಮಶೇಖರ ಮಹಾಸ್ವಾಮೀಜಿ, ಶ್ರೀರುದ್ದಮುನಿ ಮಹಾಸ್ವಾಮೀಜಿ ಸೇರಿದಂತೆ ಹಲವರು ಹರಗುರುಚರಮೂರ್ತಿಗಳು, ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ನಿವೃತ್ತ ಎಸಿಪಿ ಹೆಚ್.ಸುಬ್ಬಣ್ಣ, ರೇವಣ್ಣಸಿದ್ದಯ್ಯ, ಎಲ್.ಕಮಲಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News