ಶಿಕ್ಷಣ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ: ಪ್ರಧಾನಿಗೆ ಪತ್ರ ಬರೆದ ರೂಪ್ಸಾ

Update: 2022-08-26 15:07 GMT

ಬೆಂಗಳೂರು, ಆ.26: ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಬೇಜವಾಬ್ದಾರಿ ಹಾಗೂ ದುರಾಸೆಯ ಪರಿಣಾಮ ಕಳೆದ ಎರಡು ವರ್ಷದಿಂದ ಖಾಸಗಿ ಶಾಲೆಗಳು ನೋವಿನಲ್ಲಿದ್ದು, ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಪ್ರಧಾನಿಗಳು ಮಧ್ಯೆ ಪ್ರವೇಶಿಸಿ, ಭ್ರಷ್ಟ ಸಚಿವರನ್ನು ವಜಾಗೊಳಿಸಿ, ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್‍ಮೆಂಟ್ ಸಂಘ(ರೂಪ್ಸಾ) ಕರ್ನಾಟಕವು ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. 

‘ರಾಜ್ಯದಲ್ಲಿ ಶಿಕ್ಷಣ ಮಂತ್ರಿಗಳ ಕುಮ್ಮಕ್ಕಿನಿಂದ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಗಳ ಆದೇಶಕ್ಕೆ ಕನಿಷ್ಠ ಗೌರವ ನೀಡದೆ, ನಮ್ಮ ಮನವಿಗಳನ್ನು ಕಸದ ಬುಟ್ಟಿಗೆ ಹಾಕಲಾಗಿದೆ. ಪರಿಣಾಮ ರಾಜ್ಯದಲ್ಲಿ ಸಾವಿರಾರು ಶಾಲೆಗಳು, ವಿಶೇಷವಾಗಿ ಬೀದರ್‍ನಂತಹ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿಯ ನೂರಾರು ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿದೆ. ಲಂಚ ಕೊಡದೆ ಮಾನ್ಯತೆ ನವೀಕರಣ ನೀಡುತ್ತಿಲ್ಲ. ಆರ್‍ಟಿಇ ಶುಲ್ಕ ಮರುಪಾವತಿ ಮಾಡುತ್ತಿಲ್ಲ. ಆರ್.ಆರ್. ಇಲ್ಲದ ಎಸೆಸ್ಸೆಲ್ಸಿ ಪರೀಕ್ಷೆ ನೋಂದಾವಣೆ ನೀಡುತ್ತಿಲ್ಲ’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಖಾಸಗಿ ಶಾಲೆಗಳಲ್ಲಿ ಅನ್ಯ ಪಠ್ಯಕ್ರಮ ಅನುಸರಿಸಲು ಎನ್‍ಓಸಿ ಕೊಡುತ್ತಿಲ್ಲ. ಪ್ರತಿ ತಿಂಗಳು ಇಲಾಖೆಗೆ ಮಾಮೂಲಿ ವಸೂಲಿಗೆಂದು ಸರಕಾರಿ ನೌಕರರನ್ನು ಖಾಸಗಿ ಶಾಲೆಗಳಿಗೆ ದಾಖಲೆಗಳ ನೆಪದಲ್ಲಿ ಕಳಿಸಿ ವಸೂಲಿ ದಂಧೆಗಳು ಬಹಿರಂಗವಾಗಿ ನಡೆಯುತ್ತಿವೆ ಎಂದು ತಿಳಿಸಲಾಗಿದೆ.

ಶಿಕ್ಷಣ ಮಂತ್ರಿಗಳ ಶಿಫಾರಸ್ಸಿನಂತೆ ವರ್ಷಕ್ಕೊಮ್ಮೆ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳು ತಾವು ಇರುವ ಸ್ಥಳದಲ್ಲಿಯೇ ಮುಂದುವರೆಯಲು ಲಕ್ಷಾಂತರ ಹಣವನ್ನು ಅಧಿಕಾರಿಗಳಿಗೆ ನೀಡಬೇಕು. ಹೀಗೆ ಹಣ ನೀಡಿ ಬರುವ ಅಧಿಕಾರಿಗಳು ಲಂಚ ನೀಡಿದ ನೂರರಷ್ಟು ಹಣವನ್ನು ಸಂಪಾದಿಸುತ್ತಾರೆ. ಇದು ಶಿಕ್ಷಣ ಸಚಿವರ ಕೊಡುಗೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಶಿಕ್ಷಕರಿಲ್ಲ, ಸಮವಸ್ತ್ರ ಇನ್ನೂ ಬಂದಿಲ್ಲ ಮತ್ತು ಶೂ ಸಾಕ್ಸ್ ಕೊಟ್ಟಿಲ್ಲ. ಸೈಕಲ್ ಸೇರಿ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ. ಇಷ್ಟು ಸಮಸ್ಯೆಗಳು ಇದ್ದರೂ, ದಿನಕ್ಕೊಂದು ಬಣ್ಣ ಬಣ್ಣದ ಹೊಸ ಆದೇಶಗಳನ್ನು ಹೊರಡಿಸಿ, ಹೊಸ ಮಾರ್ಗಗಳನ್ನು ಹುಡುಕುವಲ್ಲಿ ಇಲಾಖಾ ಅಧಿಕಾರಿಗಳು ತಲ್ಲೀನರಾಗಿದ್ದಾರೆ. ಶಿಕ್ಷಣ ಮಂತ್ರಿಗಳು ಧಾರ್ಮಿಕ ಸೂಕ್ಷ್ಮ ವಿಚಾರಗಳನ್ನು ಮುನ್ನಲೆಗೆ ತಂದು ಶಿಕ್ಷಣವನ್ನು ಕಲುಷಿತಗೊಳಿಸಿದ್ದಾರೆ ಎಂದು ಟೀಕಿಸಲಾಗಿದೆ.

► ಶಿಕ್ಷಣ ಇಲಾಖೆಯಲ್ಲೂ 40%: ಆರೋಪ

ಆರ್‍ಟಿಇ ಅಡಿಯಲ್ಲಿ ಶುಲ್ಕವನ್ನು ಮರುಪಾವತಿ ಮಾಡಬೇಕಾದರೆ, ಶೇ.30 ರಿಂದ ಶೇ.40ರಷ್ಟು ಲಂಚವನ್ನು ನೀಡಬೇಕಾಗಿದೆ. ಸಾವಿರಾರು ಶಾಲೆಗಳು ಲಂಚವನ್ನು ನೀಡಲಾಗದೆ, ಆರ್ಟಿ ಇ ಶುಲ್ಕಕ್ಕೆ ಅರ್ಜಿ ಸಲ್ಲಿಸಲಾಗದೆ ಮೂಕವೇದನೆಯನ್ನು ಅನುಸರಿಸುತ್ತಿವೆ. ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ವಿವರವಾಗಿ ತಿಳಿಸಿದ್ದೇವೆ. ಈ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಸಿದ್ಧರಿದ್ದೇವೆ. ಭ್ರಷ್ಟಾಚಾರವು ನಮ್ಮ ದೇಶದ ದೊಡ್ಡ ಪಿಡುಗು. ಅದನ್ನು, ಬೇರು ಸಮೇತ ತೆಗೆಯದೆ ಬಿಡುವುದಿಲ್ಲ ಎಂದು ಪ್ರಧಾನಿಗಳು ತಿಳಿಸಿದ್ದಾರೆ. ಹಾಗಾಗಿ ದಾಖಲೆ ಸಮೇತ ಸಲ್ಲಿಸಿರುವ ಪ್ರಕರಣವನ್ನು ಅವರು ಪರಿಶೀಲಿಸಿ ಕ್ರಮ ವಹಿಸಬೇಕು.

-ಲೋಕೇಶ್ ತಾಳಿಕಟ್ಟೆ, ರುಪ್ಸ ಕರ್ನಾಟಕದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News